ಮಡಿಕೇರಿ, ಜು. ೨೨: ಕಳೆದ ಎಂಟತ್ತು ದಿನಗಳಿಂದ ತೀವ್ರ ಮಳೆ-ಗಾಳಿಯಿಂದಾಗಿ ನಲುಗಿದ್ದ ಜಿಲ್ಲೆ ಇದೀಗ ನಿಧಾನಗತಿಯಲ್ಲಿ ಸಹಜತೆಯತ್ತ ಬರುತ್ತಿದೆ. ಕಳೆದ ಎರಡು ದಿನಗಳಿಂದ ಮಳೆ ಒಂದಷ್ಟು ಕಡಿಮೆಯಾಗಿದೆ. ಆದರೆ ಜಿಲ್ಲೆಯ ಹಲವೆಡೆ ರಭಸದ ಗಾಳಿ ಕಂಡು ಬರುತ್ತಿದೆ. ಒಂದು ವಾರದ ಸತತ ರಜೆಯ ಬಳಿಕ ಶಾಲಾ-ಕಾಲೇಜುಗಳು ಇಂದು ಪುನರಾರಂಭಗೊAಡಿದ್ದು, ವಿದ್ಯಾರ್ಥಿಗಳ
(ಮೊದಲ ಪುಟದಿಂದ) ಶೈಕ್ಷಣಿಕ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಮಳೆ ಕಡಿಮೆಯಾಗಿದ್ದರೂ ಮೋಡ ಕವಿದ ವಾತಾವರಣದೊಂದಿಗೆ ಚಳಿಯೂ ಮುಂದುವರಿದಿದೆ. ಸ್ವಲ್ಪಮಟ್ಟಿಗೆ ಗಾಳಿ ಹೆಚ್ಚಾಗಿರುವುದರಿಂದ ಇನ್ನೂ ಆತಂಕ ಕಡಿಮೆಯಾಗಿಲ್ಲ. ಪ್ರಸಕ್ತ ವರ್ಷ ಜಿಲ್ಲೆಗೆ ಕಳೆದ ಬಾರಿಗಿಂತ ಅಧಿಕ ಮಳೆ ಸುರಿದಿದೆ. ಜನವರಿಯಿಂದ ಈ ತನಕ ಜಿಲ್ಲೆಗೆ ಸರಾಸರಿ ೬೫.೩೦ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೩೦.೭೬ ಇಂಚಿನಷ್ಟಾಗಿತ್ತು. ಈ ಬಾರಿ ಮಳೆಯ ಪ್ರಮಾಣ ೩೪.೫೪ ಇಂಚುಗಳಷ್ಟು ಹೆಚ್ಚಾಗಿದೆ. ಅದರಲ್ಲೂ ಮಡಿಕೇರಿ ತಾಲೂಕಿಗೆ ಈ ಬಾರಿ ಹೆಚ್ಚಿನ ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೯೧.೮೪ ಇಂಚು ಮಳೆಯಾಗಿದೆ. ಕಳೆದ ಬಾರಿ ೫೨.೩೪ ಇಂಚಿನಷ್ಟು ದಾಖಲಾಗಿದ್ದು, ಈ ಬಾರಿ ೩೯.೫೦ ಇಂಚು ಅಧಿಕ ಮಳೆ ಕಂಡು ಬಂದಿದೆ.
ಜಿಲ್ಲೆಯ ಇನ್ನಿತರ ತಾಲೂಕುಗಳಲ್ಲಿಯೂ ಈ ಬಾರಿ ಅಧಿಕ ಮಳೆಯಾಗಿದೆ. ಜನವರಿಯಿಂದ ಈತನಕ ವೀರಾಜಪೇಟೆ ೬೨.೬೮, ಪೊನ್ನಂಪೇಟೆ ೬೨.೦೩, ಸೋಮವಾರಪೇಟೆ ೬೮.೧೩ ಹಾಗೂ ಕುಶಾಲನಗರ ತಾಲೂಕಿಗೆ ೪೧.೫೨ ಇಂಚು ಮಳೆಯಾಗಿದೆ. ಕಳೆದ ವರ್ಷ ವೀರಾಜಪೇಟೆ ೨೪.೦೨, ಪೊನ್ನಂಪೇಟೆ ೨೫.೭೯, ಸೋಮವಾರಪೇಟೆ ೩೧.೫೫ ಹಾಗೂ ಕುಶಾಲನಗರದಲ್ಲಿ ೨೦.೧೦ ಇಂಚು ಮಳೆಯಾಗಿತ್ತು.