ಮಡಿಕೇರಿ, ಜು. ೨೩: ಹಳೆ ದ್ವೇಷದಿಂದ ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿ, ಜಾತಿ ನಿಂದನೆ ಮಾಡಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಾದಪಟ್ಟಣ ಗ್ರಾಮ ನಿವಾಸಿ ಅಣ್ಣಾಜಿ ಎಂಬವರಿಗೆ ಕಳೆದ ತಾ. ೧೧.೧೦.೨೦೨೨ ರಂದು ಅದೇ ಗ್ರಾಮದ ನಿವಾಸಿ ನಂದೀಶ ಎಂಬಾತ ಪೂರ್ವ ದ್ವೇಷದಿಂದ ಜಾತಿ ನಿಂದನೆ ಮಾಡಿ, ಕತ್ತಿಯಿಂದ ತಲೆ ಹಾಗೂ ಎಡಭಾಗದ ಕಿವಿಯ ಬಳಿ ಕಡಿದಿದ್ದು, ಕಿವಿಯ ಭಾಗ ತುಂಡಾಗಿರುತ್ತದೆ. ದವಡೆಯ ಮೂಳೆ ಮುರಿದು ತೀª್ರÀ ಸ್ವರೂಪದ ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದ ಈ ಹಿನ್ನೆಲೆಯಲ್ಲಿ ನಂದೀಶನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ತಾ. ೧೧.೧೦.೨೦೨೨ರಂದು ದೂರು ದಾಖಲಾಗಿತ್ತು. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕಲಂ ೩೦೭ ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿ ನಂದೀಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಕರಣದ ತನಿಖಾಧಿಕಾರಿಯಾದ ಡಿಎಸ್‌ಪಿ ಆರ್.ವಿ ಗಂಗಾಧರಪ್ಪ, ಮತ್ತು ಸಿಬ್ಬಂದಿಗಳು ತನಿಖೆ ಕೈಗೊಂಡು ಆರೋಪಿ ನಂದೀಶನ ವಿರುದ್ಧ ದೋಷಾರೋಪಣ ಪತ್ರವನ್ನು ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿ ದಿನಾಂಕ ೨೩.೦೭.೨೦೨೪ರಂದು ಸದರಿ ಪ್ರಕರಣದ ಆರೋಪಿ ನಂದೀಶನಿಗೆ ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಒಟ್ಟು ೧೦ ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. ೧೫,೦೦೦ ಗಳ ದಂಡವನ್ನು ವಿಧಿಸಿ ಘನ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಪ್ರಶಾಂತಿ ತೀರ್ಪು ನೀಡಿರುತ್ತಾರೆ.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು, ಸಾಕ್ಷಾö್ಯಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಂದೀಶ್‌ಗೆ ಕೊಲೆ ಯತ್ನ ಅಪರಾಧಕ್ಕಾಗಿ ೧೦ ವರ್ಷ ಕಠಿಣ ಶಿಕ್ಷೆ, ಕತ್ತಿಯಿಂದ ಕಡಿದು ಗಾಯ ಗೊಳಿಸಿದಕ್ಕಾಗಿ ೧೦ ವರ್ಷ ಕಠಿಣ ಶಿಕ್ಷೆ, ಸಾಮಾನ್ಯ ಗಾಯಕ್ಕಾಗಿ ೩ ವರ್ಷ ಶಿಕ್ಷೆ, ಜೀವ ಬೆದರಿಕೆ ಹಾಕಿದ್ದಕ್ಕಾಗಿ ೨ ವರ್ಷ, ಜಾತಿ ನಿಂದನೆ ಅಪರಾಧಕ್ಕಾಗಿ ೩ ವರ್ಷ ಶಿಕ್ಷೆ ಹಾಗೂ ರೂ. ೧೫ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ರೂ. ೧೫ ಸಾವಿರವನ್ನು ಅಣ್ಣಾಜಿಯವರಿಗೆ ಪಾವತಿಸುವಂತೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಅಣ್ಣಾಜಿಯವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ತೀರ್ಪಿನ ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕ ಎನ್.ಪಿ. ದೇವೇಂದ್ರ ವಾದ ಮಂಡಿಸಿದ್ದರು.