ವಿಶೇಷ ವರದಿ - ಚಂದ್ರಮೋಹನ್ ಎಂ.ಎನ್.

ಕುಶಾಲನಗರ, ಜು. ೨೩: ವಾರ್ಷಿಕ ಮೂರು ಬಾರಿ ತುಂಬಿ ಕೃಷಿ ಚಟುವಟಿಕೆಗಳಿಗೆ ಹರಿಸುವ ಉದ್ದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಹಾರಂಗಿ ಜಲಾಶಯ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುವುದರೊಂದಿಗೆ ಇದುವರೆಗೆ ಜಲಾಶಯಕ್ಕೆ ೧೧.೫೭ ಟಿ.ಎಂ.ಸಿ. ಪ್ರಮಾಣದ ನೀರು ಹರಿದು ಬಂದಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಕ್ಕೆ ನೀರಿನ ಹರಿವಿನ ಕೊರತೆ ಕಂಡುಬAದಿತ್ತು. ೨೦೨೩ ಜುಲೈ ೨೨ ರಂದು ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಲಾಗಿತ್ತು. ಆದರೆ ಈ ವರ್ಷ ೭.೫೩ ಟಿ.ಎಂ.ಸಿ. ಹೆಚ್ಚುವರಿ ನೀರನ್ನು ಜಲಾಶಯದಿಂದ ನದಿಗೆ ಹರಿಸಲಾಗಿದೆ.

ಹಾರಂಗಿ ಅಣೆಕಟ್ಟು ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಸಮರ್ಪಕವಾಗಿ ಜಲಾಶಯದ ನೀರಿನ ನಿರ್ವಹಣೆ ಮಾಡಿದ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದ ಹಾಗೂ ಕಾವೇರಿ ನದಿ ಪಾತ್ರದ ಹಲವು ಬಡಾವಣೆಗಳು ಜಲಾವೃತಗೊಳ್ಳುವುದು ತಪ್ಪಿದಂತಾಗಿದೆ.

ಕಳೆದ ಹತ್ತು ದಿನಗಳ ಕಾಲ ಅಣೆಕಟ್ಟು ಮತ್ತು ಕಾವೇರಿ ನದಿಯ ನೀರಿನ ಹರಿವಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಿದ ಕಾರಣ ಹಾರಂಗಿ ಅಣೆಕಟ್ಟು ಕೆಳಭಾಗದ ಕುಶಾಲನಗರ ಪಟ್ಟಣ ವ್ಯಾಪ್ತಿಯ ತಗ್ಗು ಪ್ರದೇಶದ ಬಡಾವಣೆಗಳು ನೆರೆಯ ಕೊಪ್ಪ ವ್ಯಾಪ್ತಿಯ ಮನೆಗಳು ಸೇರಿದಂತೆ ನದಿ ಪಾತ್ರದ ಸುಮಾರು ಸಾವಿರಕ್ಕೂ ಅಧಿಕ ಮನೆಗಳು ಜಲಾವೃತಗೊಳ್ಳುವುದನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಆದರೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿದ ಹಿನ್ನೆಲೆಯಲ್ಲಿ ಕೊನೆ ಹಂತದಲ್ಲಿ ಕುಶಾಲನಗರದ ತಗ್ಗು ಪ್ರದೇಶದ ಬಡಾವಣೆಯಾದ ಸಾಯಿ ಬಡಾವಣೆಗೆ ವಾಡಿಕೆಯಂತೆ ನೀರು ನುಗ್ಗಿದ್ದು ಸುಮಾರು ೨೦ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು ಹೊರತುಪಡಿಸಿದರೆ ಇನ್ನು ಯಾವುದೇ ಅನಾಹುತ ಸಂಭವಿಸಿಲ್ಲ. ಸಾಯಿ ಬಡಾವಣೆಗೆ ಕುಶಾಲನಗರ ಪಟ್ಟಣ ವ್ಯಾಪ್ತಿಯ ಬಹುತೇಕ ಬಡಾವಣೆಗಳಿಂದ ರಾಜಕಾಲುವೆ ಮೂಲಕ ಹರಿದು ಬರುತ್ತಿರುವ ಮಳೆ ನೀರು ಕೂಡ ಮನೆಗಳು ಜಲಾವೃತಗೊಳಲು ಇನ್ನೊಂದು ಕಾರಣವಾಗಿದೆ.

ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಮಾಹಿತಿ ಮೇರೆಗೆ ಈ ಬಾರಿ ಅಣೆಕಟ್ಟಿಗೆ ಹರಿದು ಬರುವ ನೀರಿನ ಹರಿವಿನ ಪ್ರಮಾಣ ಬಗ್ಗೆ ಸೂಕ್ಷö್ಮವಾಗಿ ಗಮನಹರಿಸಿದ್ದು ಹೆಚ್ಚಿನ ಅನಾಹುತ ತಪ್ಪಿಸಲು ಕಾರಣವಾಗಿದೆ.

ಈ ಸಂಬAಧ ಎರಡು ವಾರಗಳ ಹಿಂದೆ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರ ಸಲಹೆಯಂತೆ ಆರಂಭದಲ್ಲಿಯೇ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮ ಹಾಕಿಕೊಂಡಿದ್ದರು. ಯಾವುದೇ ಕಾರಣಕ್ಕೂ ಕುಶಾಲನಗರದ ಬಡಾವಣೆಗಳು ಜಲಾವೃತಗೊಳ್ಳ ಬಾರದು ಎನ್ನುವುದು ಶಾಸಕರ ಆಶಯವಾಗಿತ್ತು. ಈ ಸಂಬAಧ ಅಣೆಕಟ್ಟು ಅಧಿಕಾರಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದ್ದರು.

ನಂತರ ಅಧಿಕಾರಿಗಳು ಜಲಾಶಯದ ನೀರಿನ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ಜಲಾಶಯದಿಂದ ನದಿಗೆ ಹರಿಸುವಲ್ಲಿ ಕ್ರಮ ಕೈಗೊಂಡಿದ್ದರು.

ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಬಿ.ಜೆ. ಪುಟ್ಟಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಹಾಯಕ ಅಭಿಯಂತರ ಸಿದ್ದರಾಜು ಮತ್ತು ಸಿಬ್ಬಂದಿ ನಿರಂತರವಾಗಿ ದಿನದ ೨೪ ಗಂಟೆಗಳ ಕಾಲ ಜಲಾಶಯಕ್ಕೆ ಬರುವ ಒಳಹರಿವು ಮತ್ತು ಕಾವೇರಿ ನದಿಯ ನೀರಿನ ಹರಿವಿನ ಪ್ರಮಾಣ ಗಮನದಲ್ಲಿಟ್ಟುಕೊಂಡು ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಶೇ. ೩೦ ರಷ್ಟು ಮಳೆ ಪ್ರಮಾಣ ಅಧಿಕ ಹಾಗೂ ಜಲಾಶಯಕ್ಕೆ ಹೆಚ್ಚುವರಿ ಪುಟ್ಟಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಹಾಯಕ ಅಭಿಯಂತರ ಸಿದ್ದರಾಜು ಮತ್ತು ಸಿಬ್ಬಂದಿ ನಿರಂತರವಾಗಿ ದಿನದ ೨೪ ಗಂಟೆಗಳ ಕಾಲ ಜಲಾಶಯಕ್ಕೆ ಬರುವ ಒಳಹರಿವು ಮತ್ತು ಕಾವೇರಿ ನದಿಯ ನೀರಿನ ಹರಿವಿನ ಪ್ರಮಾಣ ಗಮನದಲ್ಲಿಟ್ಟುಕೊಂಡು ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಶೇ. ೩೦ ರಷ್ಟು ಮಳೆ ಪ್ರಮಾಣ ಅಧಿಕ ಹಾಗೂ ಜಲಾಶಯಕ್ಕೆ ಹೆಚ್ಚುವರಿ ನೀರು ಹರಿದು ಬರುವ ಸಾಧ್ಯತೆ ಬಗ್ಗೆ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಅಣೆಕಟ್ಟಿನ ನೀರಿನ ನಿರ್ವಹಣೆ ಬಗ್ಗೆ ಇಲಾಖೆಯ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ಸೂಚನೆ ನೀಡಲಾಗಿತ್ತು ಎಂದು ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಕಾವೇರಿ ನೀರಾವರಿ ನಿಗಮದ ಬಹುತೇಕ ಅಧಿಕಾರಿಗಳನ್ನು ಅಣೆಕಟ್ಟಿನ ನೀರಿನ ಸಂಬAಧ ಸಪ್ಟೆಂಬರ್ ೩೦ರ ತನಕ ಹಲವು ಪಾಳಿಗಳಲ್ಲಿ ಕೆಲಸ ನಿರ್ವಹಿಸಲು ನಿಯೋಜಿಸಲಾಗಿದೆ.

ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಅವಲೋಕನ ಮಾಡಿ ಜಲಾಶಯದಲ್ಲಿ ಸುಮಾರು ಆರು ಅಡಿಗಳಷ್ಟು ನೀರಿನ ಸಂಗ್ರಹಕ್ಕೆ ಅಂತರ ಕಲ್ಪಿಸುವುದರ ಮೂಲಕ ಜಲಾಶಯದ ಮಟ್ಟವನ್ನು ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಯಿತು. ಈ ಹಿನ್ನೆಲೆಯಲ್ಲಿ ಜಲಾಶಯದ ಕೆಳಭಾಗದ ಬಡಾವಣೆಗಳಿಗೆ ಯಾವುದೇ ರೀತಿಯ ಹೆಚ್ಚಿನ ಪ್ರಮಾಣದ ಅನಾಹುತ ಉಂಟಾಗಿಲ್ಲ ಎಂದು ಪುಟ್ಟಸ್ವಾಮಿ ತಿಳಿಸಿದ್ದಾರೆ.

ಈ ಬಾರಿ ಪುನರ್ವಸು ಮಳೆ ಮನಸೋ ಇಚ್ಛೆ ಸುರಿದ ಹಿನ್ನೆಲೆಯಲ್ಲಿ ಈ ಬಾರಿ ಹಾರಂಗಿ ಮತ್ತು ಕಾವೇರಿ ನದಿ ಪಾತ್ರದ ನಿವಾಸಿಗಳು ಸಂಪೂರ್ಣ ಆತಂಕಕ್ಕೆ ಒಳಗಾಗಿದ್ದರು. ಕಾವೇರಿ ನದಿಯ ನಿರ್ವಹಣೆ ನಿರಂತರವಾಗಿ ನಡೆದಲ್ಲಿ ಶಾಶ್ವತವಾಗಿ ಕುಶಾಲನಗರವನ್ನು ಪ್ರವಾಹ ಮುಕ್ತ ಪ್ರದೇಶವಾಗಿಸಲು ಸಾಧ್ಯ ಎಂದು ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಉಪಾಧ್ಯಕ್ಷ ತೋರೆರ ಉದಯ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಅಣೆಕಟ್ಟು ಅಧಿಕಾರಿಗಳು ಪ್ರವಾಹ ಸಂದರ್ಭ ಸಮರ್ಪಕವಾಗಿ ನೀರು ಬಿಡುಗಡೆ ಸಂದರ್ಭ ಎಚ್ಚರಿಕೆ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಂಟಾಗಲಿರುವ ಸಂಭಾವ್ಯ ಅನಾಹುತಗಳು ತಪ್ಪಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಕುವೆಂಪು ಬಡಾವಣೆಯಲ್ಲಿ ಅಂದಾಜು ನಾಲ್ಕು ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದು ಈ ಬಾರಿ ಪ್ರವಾಹವನ್ನು ತಡೆಯುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಇದೇ ರೀತಿಯ ಯೋಜನೆಗಳು ಕಾವೇರಿ ನದಿಯ ಎರಡೂ ಭಾಗಗಳಲ್ಲಿ ನಿರ್ಮಾಣಗೊಂಡಲ್ಲಿ ನದಿ ಪಾತ್ರದ ಸಾವಿರಾರು ಸಂಖ್ಯೆಯ ನಾಗರಿಕರ ಆತಂಕ ಶಾಶ್ವತವಾಗಿ ದೂರ ಮಾಡಲು ಸಾಧ್ಯ ಎನ್ನುವುದು ನದಿ ಪ್ರವಾಹ ಸಂತ್ರಸ್ತರ ವೇದಿಕೆಯ ಮನವಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಇದೀಗ ಹಾರಂಗಿ ಜಲಾಶಯದಲ್ಲಿ ೬.೯ ಟಿ.ಎಂ.ಸಿ. ಪ್ರಮಾಣದ ನೀರಿನ ಸಂಗ್ರಹವಿದ್ದು, ನದಿಗೆ ೮೦೬೯ ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಸಲಾಗುತ್ತಿದೆ. ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕ್ಷೀಣಗೊಂಡಿದೆ ಎಂದು ಅಣೆಕಟ್ಟು ಸಹಾಯಕ ಅಭಿಯಂತರರಾದ ಸಿದ್ದರಾಜು ಅವರು ಮಾಹಿತಿ ನೀಡಿದ್ದಾರೆ.

ಜಲಾಶಯದ ಗರಿಷ್ಠ ಸಂಗ್ರಹಮಟ್ಟ ೨೮೫೯ ಅಡಿಗಳಾಗಿದ್ದು, ಇದೀಗ ಅಣೆಕಟ್ಟಿನಲ್ಲಿ ೨೮೫೪.೪೨ ಅಡಿಗಳಷ್ಟು ನೀರಿನ ಸಂಗ್ರಹ ಇರುವುದಾಗಿ ತಿಳಿಸಿದ್ದಾರೆ.