ನಾಲ್‌ನಾಡ್ ಬಲ್ಲಮಾವಟಿ ಸಮೀಪದ ಪೇರೂರು ಗ್ರಾಮದ ಬೊಟ್ಟೋಳಂಡ ದಿವಂಗತ ದೇವಯ್ಯ ಮತ್ತು ದೇವಮ್ಮ ದಂಪತಿಯ ದ್ವಿತೀಯ ಪುತ್ರನಾಗಿ ೧೯೩೪ ರ ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದ ಬಿದ್ದಯ್ಯ ನವರಿಗೆ ಇಬ್ಬರು ಸಹೋದರರು ಹಾಗೂ ಒಬ್ಬ ಸಹೋದರಿ. ಪೊನ್ನಚೆಟ್ಟಿರ ಪೊನ್ನವ್ವ ರನ್ನು ವರಿಸಿದ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಕೊಡಗಿನ ಪ್ರತಿಷ್ಠಿತ ಪೊನ್ನಂಪೇಟೆಯ ಸಿ.ಐ.ಟಿ. ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದಾರೆ.
ಬಿ. ಡಿ. ಬಿದ್ದಯ್ಯ ಎಂದೇ ಜನಾನುರಾಗಿದ್ದ ಬೊಟ್ಟೋಳಂಡ ಬಿದ್ದಯ್ಯನವರು ತಮ್ಮ ವಿದ್ಯಾಭ್ಯಾಸವನ್ನು ಪಾರಾಣೆ ಹಾಗೂ ನಾಪೋಕ್ಲುವಿನಲ್ಲಿ ಮುಗಿಸಿ ಅಧ್ಯಾಪಕ ವೃತ್ತಿ ಜೀವನವನ್ನು ಪೇರೂರು ಶಾಲೆಯಿಂದ ಪ್ರಾರಂಭಿಸಿದರು. ತಮ್ಮ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಜನಸಂಘದಲ್ಲಿ ಗುರುತಿಸಿಕೊಂಡ ಇವರು ಅಜ್ಜಿಕುಟ್ಟಿರ ಕೆ. ಸುಬ್ಬಯ್ಯನವರು ಅಧ್ಯಕ್ಷರಾಗಿದ್ದಾಗ ರಾಜ್ಯ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದು ಅನೇಕ ರಾಜ್ಯ ಹಾಗೂ ರಾಷ್ಟçಮಟ್ಟದ ಉತ್ತಮ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಪೇರೂರಿನ ಗ್ರೈನ್ ಬ್ಯಾಂಕ್ (ಜಿ. ಬಿ.) ಹಾಗೂ ವಿ. ಎಸ್. ಎಸ್. ಎನ್. ಬ್ಯಾಂಕಿನಲ್ಲಿ ನಿರ್ದೇಶಕರಾಗಿಯೂ, ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಕೊಡಗು ಜಿಲ್ಲಾ ಸಹಕಾರ ಒಕ್ಕೂಟ, ಡಿ.ಸಿ.ಸಿ. ಬ್ಯಾಂಕ್ ಮಡಿಕೇರಿ, ಕೊಡಗು ಜಿಲ್ಲಾ ಏಲಕ್ಕಿ ಸೊಸೈಟಿಗಳಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾಗಮಂಡಲದ ಜೇನು ಮತ್ತು ಮೇಣ ಉತ್ಪಾದಕರ ಸಂಘದಲ್ಲಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಾಪೋಕ್ಲುವಿನ ಪ್ರತಿಷ್ಠಿತ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ರಾಗಿಯೂ, ನಿರ್ದೇಶಕರಾಗಿಯೂ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆಯ ನಿರ್ದೇಶಕರಾಗಿಯೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಹಗಲು ಇರುಳು ಎನ್ನದೆ ದುಡಿದಿದ್ದಾರೆ. ಇವರ ಇಷ್ಟೆಲ್ಲಾ ಸೇವೆಗಳನ್ನು ಪರಿಗಣಿಸಿ ೨೦೦೪ ರಲ್ಲಿ ವಾಜಪೇಯಿ ಸರಕಾರ ರಾಷ್ಟ್ರಮಟ್ಟದ ಸಹಕಾರಿ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪ್ರಶಸ್ತಿಯನ್ನಾಗಲಿ ಪದವಿಯನ್ನಾಗಲಿ ಅರಸಿ ಹೋಗದೆ ಸಾಮಾಜಿಕ ಕಳಕಳಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಅದೆಷ್ಟೋ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಪೆರೂರಿನಿಂದ ಪ್ರತಿದಿನ ಸುಮಾರು ನಾಲ್ಕು ಕಿ. ಮಿ. ಕಾಲುನಡಿಗೆಯಲ್ಲಿ ಆಗಮಿಸಿ ತನ್ನನ್ನು ತಾನು ಉತ್ತಮ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಹಿರಿಯ ಜೀವ ಮೂರು ವರ್ಷಗಳ ಹಿಂದೆ ಪತ್ನಿ ತೀರಿಕೊಂಡ ಮೇಲೆ ವಯೋಸಹಜ ಬಳಲಿಕೆಯನ್ನು ಅನುಭವಿಸಿ ಅನಾರೋಗ್ಯದಿಂದ ಇತ್ತೀಚಿಗೆ ತಮ್ಮ ಮಗನ ಮನೆಯಲ್ಲಿ ಚಿರನಿದ್ರೆಗೆ ಜಾರಿದರು. ಉತ್ತಮ ನಡೆ ನುಡಿಯ ಸಮಾಧಾನ ವ್ಯಕ್ತಿತ್ವದ ಹಿರಿಯ ಚೇತನ ಬೊಟ್ಟೋಳಂಡ ಬಿದ್ದಯ್ಯನವರು ಮತ್ತೊಮ್ಮೆ ಹುಟ್ಟಿ ಬರಲಿ ಅವರ ಸೇವೆ ನಮಗೆಲ್ಲ ಮಾರ್ಗದರ್ಶನವಾಗಲಿ, ಇವರ ಅಗಲಿದ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ಹಾರೈಸುವ.
-ಕರವಂಡ ಸೀಮಾ ಗಣಪತಿ,
ದೊಡ್ಡಪುಲಿಕೋಟ್