ಗೋಣಿಕೊಪ್ಪ, ಜು. ೨೪: ಪೊನ್ನಂ ಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್ಕ್ಲಬ್ ಸಹಯೋಗದಲ್ಲಿ ನಲ್ಲೂರು ಗ್ರಾಮದ ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಪತ್ರಕರ್ತರ ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಪತ್ರಕರ್ತರು ಕೆಸರಿನಲ್ಲಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಹ್ಯಾAಡ್ಬಾಲ್, ಹಗ್ಗಜಗ್ಗಾಟ, ಓಟ, ಏಡಿ ಹಿಡಿಯುವ ಸ್ಪರ್ಧೆ, ಮಹಿಳೆಯರಿಗೆ ಆಯೋಜಿಸಿದ್ದ ಲೆಮೆನ್ ವಿತ್ ಸ್ಪೂನ್ ನಡಿಗೆ ಸ್ಪರ್ಧೆಯಲ್ಲು ಸುಮಾರು ೭೦ ಕ್ಕೂ ಹೆಚ್ಚು ಪತ್ರಕರ್ತರು ಮಿಂದೆದ್ದರು.
ಕರ್ನಾಟಕ ಕಾರ್ಯನಿರತ ಪತ್ರಕ ರ್ತರ ಸಂಘದ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಕ್ರೀಡಾಕೂಟವನ್ನು ಗೋಲ್ ಪೋಸ್ಟ್ಗೆ ಚೆಂಡು ಎಸೆಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ನಾವು ಕೆಸರು ಎಂಬ ಅನುಭವವನ್ನೇ ಇನ್ನೂ ಅನುಭವಿಸಿಲ್ಲ. ಮಳೆ, ಚಳಿ, ಗಾಳಿಯ ನಡುವೆ ಭತ್ತದ ಗದ್ದೆಯಲ್ಲಿ ಹೊತ್ತು ಕಳೆಯುವುದೇ ಸವಾಲು. ಇದರ ನಡುವೆ ಗದ್ದೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ದೈಹಿಕ ಮತ್ತು ಮಾನಸಿಕ ಸಮತೋಲನದ ಸಂದೇಶವನ್ನು ಸಾರುತ್ತದೆ. ಉತ್ತಮ ಆರೋಗ್ಯಕ್ಕೆ ಗದ್ದೆಯಲ್ಲಿ ಕೃಷಿ ಮಾಡುತ್ತದೆ. ಇವೆಲ್ಲವನ್ನೂ ಅನುಭವಿಸುವುದೇ ರೋಮಾಂಚನ ಅನುಭವ. ಸ್ವಚ್ಚ, ನೈರ್ಮಲ್ಯತೆಯಿಂದ ಕೂಡಿರುವ ಕೊಡಗು ಇದೇ ರೀತಿ ಉಳಿದುಕೊಳ್ಳಬೇಕು. ಪತ್ರಕರ್ತರ ಒಡನಾಟ, ಒಗ್ಗಟ್ಟು, ಸಹಬಾಳ್ವೆಗೆ ಕ್ರೀಡಾಕೂಟ ಸಹಕಾರಿಯಾಗುತ್ತಿದೆ ಎಂದರು.
ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಭತ್ತ ಕೃಷಿಯಿಂದ ಆಹಾರ ಉತ್ಪಾದನೆಯೊಂದಿಗೆ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದಾಗಿ ಭತ್ತ ಕೃಷಿಯಿಂದ ದೂರ ಉಳಿಯಬಾರದು. ಕಕ್ಕಡ ತಿಂಗಳಲ್ಲಿ ಗದ್ದೆಯಲ್ಲಿನ ಕೆಸರು ದೇಹದ ಆರೋಗ್ಯಕ್ಕೆ ಚೈತನ್ಯ ತರುತ್ತದೆ. ದೇಹದ ನಾನಾ ರೋಗಗಳಿಗೂ ರಾಮಬಾಣವಾಗಿದೆ ಎಂದರು. ಭತ್ತ ಕೃಷಿಯೊಂದಿಗೆ ಮಿಶ್ರಬೆಳೆ ಬೆಳೆಯಲು ಉತ್ಸುಕತೆ ತೋರಬೇಕಿದೆ. ಕೆರೆಗಳ ಸಂರಕ್ಷಣೆಯಿAದ ಭವಿಷ್ಯದಲ್ಲಿ ನೀರಿನ ಬವಣೆ ನೀಗಿಸಲು ಸಾಧ್ಯವಿದೆ. ಅನಾವಶ್ಯಕ ನೀರು ಪೋಲಾಗದಂತೆ ಎಚ್ಚರವಹಿಸಲು ಉಳುಮೆ ಸಹಕಾರಿಯಾಗಿದೆ ಎಂದು ಹೇಳಿದರು.
ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಭತ್ತ ಬೆಳೆಯುವ ಗದ್ದೆ ಇಂದು ಬರಡಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಗದ್ದೆಯಲ್ಲಿ ವಿವಿಧ ಪ್ರಯೋಗದ ಮೂಲಕ ಬೆಳೆ ಬೆಳೆಯುವ ಮೂಲಕ ಪ್ರಗತಿ ಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾದರಿಯಾಗಿದ್ದಾರೆ. ಇವರ ಉತ್ಸಾಹದಿಂದ ಪರ್ತಕ್ರರ್ತರು ಒಂದೆಡೆ ಕೆಸರಿನಲ್ಲಿ ಕ್ರೀಡೆ ಆಯೋಜಿಸಲು ಸಹಕಾರಿಯಾಗಿದೆ ಎಂದರು.
ಸAಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಸಂಘಟನೆ ಬಲವರ್ಧನೆಗೆ ಕ್ರೀಡೆ ಸಹಕಾರಿಯಾಗಿದೆ. ಉತ್ತಮ ಪರಿಸರ ಮನ ತಣಿಸುತ್ತಿದೆ ಎಂದರು.
ಪೊನ್ನAಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತದ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿದರು.
ಉದ್ಯಮಿ ಬಿ. ಬಿ. ನಾಗರಾಜು ಬಹುಮಾನ ವಿತರಣೆ ಮಾಡಿದರು. ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟಕ್ಕೆ ಉತ್ತೇಜನ ನೀಡುತ್ತಿರುವ ಬಿ. ಬಿ. ನಾಗರಾಜು ಅವರನ್ನು ಕ್ರೀಡಾಕೂಟದ ಪ್ರಯುಕ್ತ ಸನ್ಮಾನಿಸಲಾಯಿತು.
ಸಮಾರೋಪ ಕಾರ್ಯಕ್ರಮವು ಕ್ರೀಡಾಕೂಟ ಸಂಚಾಲಕ ಚಿಮ್ಮಣಮಾಡ ದರ್ಶನ್ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ ಅವಂಟಿ, ಉದ್ಯಮಿ ವಿಷ್ಣು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ರಾಜ್ಯ ಸಮಿತಿ ಸದಸ್ಯ ಟಿ.ಎನ್. ಮಂಜುನಾಥ್ ಬಹುಮಾನ ವಿತರಿಸಿದರು.
ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್ಕುಮಾರ್ ಗುಹ್ಯ ನಿರೂಪಣೆ ಮಾಡಿದರು. ಉಪಾಧ್ಯಕ್ಷ ಸುಬ್ರಮಣಿ ಸ್ವಾಗತಿಸಿದರು. ಚನ್ನನಾಯಕ ಪ್ರಾರ್ಥಿಸಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ. ವಿ. ಅರುಣ್ಕುಮಾರ್, ನಿರ್ದೇಶಕ ಸಿಂಗಿ ಸತೀಶ್ ಇದ್ದರು. ತೀರ್ಪುಗಾರರಾಗಿ ರಘು, ಮಹೇಶ್ ಕಾರ್ಯನಿರ್ವಹಿಸಿದರು.
ವಿಜೇತರ ಪಟ್ಟಿ ; ಹ್ಯಾಂಡ್ ಬಾಲ್ನಲ್ಲಿ ಇಸ್ಮಾಯಿಲ್ ಕಂಡಕೆರೆ ನಾಯಕತ್ವದ ನಾಟಿ ಬಾಯ್ಸ್ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿತು. ನವೀನ್ ಡಿಸೋಜಾ ನಾಯಕತ್ವದ ಮಡ್ ವಾರಿರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಹಗ್ಗಜಗ್ಗಾಟದಲ್ಲಿ ಚಿಮ್ಮಣಮಾಡ ದರ್ಶನ್ ದೇವಯ್ಯ ನಾಯಕತ್ವದ ಏಡಿ ಬಾಯ್ಸ್ ಪ್ರಥಮ, ಗೋಪಾಲ್ ಸೋಮಯ್ಯ ನಾಯಕತ್ವದ ಮಣ್ಣಿನ ಮಕ್ಕಳು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಏಡಿ ಬಾಯ್ಸ್ ಮತ್ತು ಮಣ್ಣಿನ ಮಕ್ಕಳು ತಂಡಗಳು ನಡುವಿನ ಹಗ್ಗಜಗ್ಗಾಟದಲ್ಲಿ ಏಡಿಬಾಯ್ಸ್ ಸೋಲಿಗೆ ಜಾರದಂತೆ ತನ್ನತ್ತ ಹಗ್ಗವನ್ನು ಎಳೆದುಕೊಂಡು ಗೆದ್ದು ಬೀಗಿತು. ರೋಚಕ ಹಣಾಹಣಿ ಇಡೀ ಟೂರ್ನಿಯ ಜಿದ್ದಾಜಿದ್ದಿಗೆ ಕಾರಣವಾಯಿತು.
ಮಹಿಳೆಯರ ಲೆಮನ್ ವಿತ್ ಸ್ಪೂನ್ ನಡಿಗೆಯಲ್ಲಿ ಚಂಪಾ ಗಗನ್ ಪ್ರಥಮ, ವಿಶ್ಮಾ ಪೆಮ್ಮಯ್ಯ ದ್ವಿತೀಯ, ದಮಯಂತಿ ತೃತೀಯ ಸ್ಥಾನ ಪಡೆದುಕೊಂಡರು. ಓಟದಲ್ಲಿ ವಿಶ್ಮಾ ಪೆಮ್ಮಯ್ಯ ಪ್ರಥಮ, ಚಂಪಾ ಗಗನ್ ದ್ವಿತೀಯ, ದಮಯಂತಿ ತೃತೀಯ, ಓಟದಲ್ಲಿ ಇಸ್ಮಾಯಿಲ್ ಕಂಡಕೆರೆ ಪ್ರಥಮ, ಆದರ್ಶ್ ದ್ವಿತೀಯ, ನವೀನ್ ಡಿಸೋಜಾ ತೃತೀಯ, ೪೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಗೋಪಾಲ್ ಸೋಮಯ್ಯ ಪ್ರಥಮ, ಪಾರ್ಥ ಚಿಣ್ಣಪ್ಪ ದ್ವಿತೀಯ, ಚನ್ನನಾಯಕ ತೃತೀಯ ಸ್ಥಾನ ಪಡೆದರು.
ಏಡಿ ಇಡಿಯುವ ಸ್ಪರ್ಧೆಯಲ್ಲಿ ಆಂಥೋನಿ-ವಿನೋದ್ ಮೂಡಗದ್ದೆ ಜೋಡಿ ಪ್ರಥಮ, ರೆಜಿತ್ಕುಮಾರ್ ಗುಹ್ಯ-ಪುತ್ತಮ್ ಪ್ರದೀಪ್ ಜೋಡಿ ದ್ವಿತೀಯ ಸ್ಥಾನ ಪಡೆಯಿತು. ಮನರಂಜನೆಯಲ್ಲಿ ಸಿದ್ದಾಪುರದ ಕೃಷ್ಣ ಪ್ರಥಮ ಬಹುಮಾನ ಪಡೆದರು. ವಿಜೇತರಿಗೆ ನಗದು ಮತ್ತು ಪದಕ ನೀಡಲಾಯಿತು.