ಮುಳ್ಳೂರು, ಜು. ೨೪: ಸಮೀಪದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ೨೦೨೪-೨೫ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆಯನ್ನು ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ನಡೆಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ರಬ್ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಅವರ ಮಾರ್ಗದರ್ಶನದಲ್ಲಿ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲೆ ಚುನಾವಣೆಯನ್ನು ನಡೆಸಲಾಯಿತು. ಮೊಬೈಲ್‌ನಲ್ಲಿ ಇವಿಎಂ ಆ್ಯಪ್ ಸಿದ್ಧಪಡಿಸಿ ಇದರಲ್ಲಿ ಅಭ್ಯರ್ಥಿಗಳ ಹೆಸರು, ಅದರ ಪಕ್ಕದಲ್ಲಿ ಚಿಹ್ನೆ ಮತ್ತು ಅದರ ಪಕ್ಕದಲ್ಲಿ ವೋಟಿಂಗ್ ಬಟನ್ ಇವುಗಳನ್ನು ಆ್ಯಪ್‌ನಲ್ಲಿ ಸಿದ್ಧಪಡಿಸಲಾಯಿತು ಮತ್ತು ಮತದಾನಕ್ಕೆ ಎರಡು ವೋಟಿಂಗ್ ಬೂತ್‌ಗಳನ್ನು ರಚಿಸಲಾಗಿತ್ತು.
ಶಾಲೆಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಪ್ರತ್ಯೇಕ ಸರತಿ ಸಾಲಿನಲ್ಲಿ ನಿಂತುಕೊAಡು ಮೊಬೈಲ್ ಇವಿಎಂ ಆ್ಯಪ್ ಮೂಲಕ ಮತದಾನ ಮಾಡಿದರು. ವಿದ್ಯಾರ್ಥಿಗಳು ಮತದಾನ ಮಾಡುವ ಮೊದಲು ಚುನಾವಣಾ ಸಿಬ್ಬಂದಿಗೆ ಆಧಾರ್ ಕಾರ್ಡ್ ತೋರಿಸಿ ಮತದಾನ ಮಾಡುವುದು ಮತ್ತು ಬೆರಳಿಗೆ ಶಾಯಿ ಹಾಕಿದ ನಂತರ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿತ್ತು.
ವಿದ್ಯಾರ್ಥಿಗಳು ಉತ್ಸಾಹದಿಂದ ಮತ್ತು ಗೌಪ್ಯತೆಯನ್ನು ಕಾಪಾಡಿಕೊಂಡು ಮತ ಚಲಾಯಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಸಿಬ್ಬಂದಿಯಾಗಿ ಶಾಲಾ ಶಿಕ್ಷಕರುಗಳಾದ ಚಂದ್ರಶೇಖರ್ ಅಡ್ಮನಿ, ಬಿ.ವಿ. ಸುಮ, ಶಿವಕುಮಾರಿ, ಕಿರಣ್ ಕುಮಾರ್, ಮಂಜುನಾಥ್, ಸುನಿಲ್, ನಂದಿತ, ಪವನ್ ಕುಮಾರ್ ಕಾರ್ಯನಿರ್ವಹಿಸಿದ್ದರು.