ಕಣಿವೆ, ಜು. ೨೪ : ಕೊಡಗಿನ ಬ್ರಹ್ಮಗಿರಿ ಬೆಟ್ಟ ಶ್ರೇಣಿ ಹಾಗೂ ಪಶ್ಚಿಮ ಘಟ್ಟ ಸಾಲಿನ ಬೆಟ್ಟಗಳಲ್ಲಿ ಸುರಿಯುವ ಮಳೆಯ ನೀರು ಹಾರಂಗಿ ಹಾಗೂ ಕಾವೇರಿ ನದಿಯ ರೂಪು ತಳೆದು ನಾಡಿನ ಜೀವಕೋಟಿಯನ್ನು ತಣಿಸುತ್ತಿರುವುದು ಇತಿಹಾಸ.
ಪ್ರತಿ ಮಳೆಗಾಲದಲ್ಲಿ ಕೊಡಗಿನಲ್ಲಿ ಸುರಿಯುವ ಮಳೆಯಿಂದಾಗಿ ತುಂಬಿ ಹರಿಯುವ ಕಾವೇರಿ ನದಿ ತಲಕಾವೇರಿಯಿಂದ ೧೨೦ ಕಿಮೀ ದೂರದ ಚುಂಚನಕಟ್ಟೆ ಬಳಿ ಶ್ರೀರಾಮದೇವರ ಸನ್ನಿಧಿಯಲ್ಲಿ ಜಲಪಾತದ ಸ್ವರೂಪ ಪಡೆದು ಅಬ್ಬರಿಸುತ್ತಾ ಹಾಲ್ನೊರೆಯಂತೆ ಧುಮ್ಮಿಕ್ಕಿ ಮುಂದೆ ಸಾಗುವ ನಯನ ಮನೋಹರ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇದೇ ಸ್ಥಳದಲ್ಲಿ ಈ ನೀರಿನಿಂದ ವಿದ್ಯುತ್ ಉತ್ಪಾದನಾ ಘಟಕವೂ ಕಾರ್ಯನಿರ್ವಹಿಸುತ್ತಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಕಾವೇರಿ ತನ್ನ ಆಸುಪಾಸಿನ ತಗ್ಗುಪ್ರದೇಶಗಳನ್ನು ಆವಾಹಿಸಿ ಅಲ್ಲಿನ ಕೃಷಿ ಚಟುವಟಿಕೆಗಳನ್ನು ನಾಶಗೊಳಿಸಿ, ಕೆಲ ವಸತಿ ಪ್ರದೇಶಗಳಿಗೂ ಹಾನಿ ಪಡಿಸಿ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಾಗುತ್ತಾಳೆ.
ಹೀಗೆ ಸಾಗುವ ಮಾರ್ಗ ಮಧ್ಯೆಯ ಚುಂಚನಕಟ್ಟೆಯ ಬಳಿ ಸ್ವಾಭಾವಿಕವಾಗಿ ರೂಪುಗೊಂಡ ಭೂರಮೆಯಲ್ಲಿ ವಯ್ಯಾರದೊಂದಿಗೆ ಹಾಲ್ನೊರೆ ಸೂಸಿ ಮುಂದೆ ಸಾಗುವ ಪರಿಯನ್ನು ನೋಡಲು ಎರಡು ಕಣ್ಣು ಸಾಲದು.
-ಕೆ.ಎಸ್.ಮೂರ್ತಿ