ಸೋಮವಾರಪೇಟೆ, ಜು. ೨೪: ಭಾರೀ ಮಳೆ-ಗಾಳಿಗೆ ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರುಕಟ್ಟೆ ಹಾಡಿಯಲ್ಲಿ ಮನೆ ಕುಸಿತಗೊಂಡು ನಷ್ಟ ಸಂಭವಿಸಿದೆ.

ಅಬ್ಬೂರುಕಟ್ಟೆ ಹಾಡಿಯಲ್ಲಿ ವಾಸವಿರುವ ವೃದ್ಧ ದಂಪತಿ ಗೌರಿ ಮತ್ತು ಪುಟ್ಟ ಅವರುಗಳು ವಾಸವಿದ್ದ ಮನೆಯು ಭಾರೀ ಮಳೆಗೆ ಸಂಪೂರ್ಣ ಕುಸಿತಗೊಂಡಿದ್ದು, ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಸ್ಥಳಕ್ಕೆ ಕಂದಾಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೃದ್ಧ ದಂಪತಿ ತಕ್ಷಣಕ್ಕೆ ಪರಿಹಾರ ಒದಗಿಸಬೇಕು. ಮುಂದಿನ ದಿನಗಳಲ್ಲಿ ನೂತನ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಜೇನು ಕುರುಬರ ಸಂಘದ ಅಧ್ಯಕ್ಷ ಜೆ.ಜೆ. ರಮೇಶ್ ಒತ್ತಾಯಿಸಿದ್ದಾರೆ.

ಮಳೆಯೊಂದಿಗೆ ಗಾಳಿಯ ರಭಸ ಹೆಚ್ಚಾಗಿದ್ದು, ಅಲ್ಲಲ್ಲಿ ಮರಗಳು ನೆಲಕ್ಕುರುಳುತ್ತಿವೆ. ಶನಿವಾರಸಂತೆ ಪಶು ಚಿಕಿತ್ಸಾಲಯದ ಪಕ್ಕದಲ್ಲಿದ್ದ ಮರ ಗಾಳಿಗೆ ಕೆಳಗುರುಳಿದ್ದು, ಆಸ್ಪತ್ರೆಗೆ ಸಂಬAಧಿಸಿದ ಕಟ್ಟಡಕ್ಕೆ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ.

ಪಟ್ಟಣ ಸಮೀಪದ ಬೇಳೂರು ಗ್ರಾಮದಲ್ಲಿ ರಸ್ತೆ ಬದಿಯಿದ್ದ ಮರ ಕೆಳಕ್ಕುರುಳಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ್ದಾರೆ. ಅಂತೆಯೇ ಶನಿವಾರಸಂತೆಯ ಬಿದರೂರಿನಲ್ಲಿ ವಾಸದ ಮನೆ ಮೇಲೆ ಮರದ ಕೊಂಬೆಗಳು ಬಿದ್ದಿದ್ದು, ಹೆಚ್ಚಿನ ಹಾನಿ ತಪ್ಪಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೮೪, ಕೊಡ್ಲಿಪೇಟೆಗೆ ೪೦.೬, ಶಾಂತಳ್ಳಿಗೆ ೧೮೪, ಸುಂಟಿಕೊಪ್ಪಕ್ಕೆ ೩೬, ಶನಿವಾರಸಂತೆಗೆ ೫೮, ಕುಶಾಲನಗರಕ್ಕೆ ೯.೨ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.