ಮಡಿಕೇರಿ, ಜು. ೨೪: ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಳೆದವಾರದಷ್ಟು ಇಲ್ಲದಿದ್ದರೂ ಮುಂಗಾರಿನ ಸನ್ನಿವೇಶ ಮುಂದುವರಿದಿದೆ. ಈಗಲೂ ಗಾಳಿ ಸಹಿತವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆಗಳಲ್ಲಿ ಹಾನಿಗಳು ವರದಿಯಾಗುತ್ತಿವೆ. ಇದೀಗ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿನ ಪ್ರಮುಖ ರಸ್ತೆಯಾಗಿರುವ ಅದರಲ್ಲೂ ಖಾಸಗಿ ಬಸ್ಗಳು ನೂತನ ಖಾಸಗಿ ಬಸ್ ನಿಲ್ದಾಣದಿಂದ ಏಕಮುಖವಾಗಿ ಸಂಚರಿಸುವ ವ್ಯವಸ್ಥೆ ಇರುವ ಕೈಗಾರಿಕಾ ಬಡಾವಣೆಯ ರಸ್ತೆ ಇದೀಗ ಅಪಾಯಕಾರಿಯಾಗಿ ಪರಿಣಮಿಸಿದೆ. ಪತ್ರಿಕಾಭವನದ ಅನತಿ ದೂರದಲ್ಲಿ ರಸ್ತೆ ಬದಿ ಕುಸಿತವಾಗಿದ್ದು, ಬಸ್ಗಳು ಸೇರಿದಂತೆ ಇತರ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಇದೀಗ ಈ ರಸ್ತೆಯಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಿ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ.
ಜಿಲ್ಲಾ ಕೇಂದ್ರ ಮಡಿಕೇರಿಗೆ ಈ ಬಾರಿ ಜನವರಿಯಿಂದ ಈತನಕ ೮೭.೩೭ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೫೨.೫೧ ಇಂಚು ಮಳೆಯಾಗಿತ್ತು. ಈ ಬಾರಿ ೩೪.೮೬ ಇಂಚು ಅಧಿಕವಾಗಿದೆ. ಬುಧವಾರ ಬೆಳಿಗ್ಗೆ ತನಕ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಡಿಕೇರಿ ನಗರಕ್ಕೆ ೧.೨೫ ಇಂಚು ಮಳೆ ಸುರಿದಿದೆ.
(ಮೊದಲ ಪುಟದಿಂದ)
ಜಿಲ್ಲೆಯಲ್ಲಿ ಸರಾಸರಿ ೧.೭೦ ಇಂಚು
ಬುಧವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೧.೭೦ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨.೦೭, ವೀರಾಜಪೇಟೆ ೦.೬೮, ಪೊನ್ನಂಪೇಟೆ ೧.೨೪, ಸೋಮವಾರಪೇಟೆ ೩.೬೬, ಕುಶಾಲನಗರ ತಾಲೂಕಿನಲ್ಲಿ ೦.೯೦ ಇಂಚು ಮಳೆಯಾಗಿದೆ. ವರ್ಷಾರಂಭದಿAದ ಜಿಲ್ಲೆಗೆ ಈ ತನಕ ಸರಾಸರಿ ೬೮.೨೮ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೯೪.೯೪, ವೀರಾಜಪೇಟೆ ೬೪.೨೪, ಪೊನ್ನಂಪೇಟೆ ೬೪.೪೦, ಸೋಮವಾರಪೇಟೆ ೭೪.೯೧ ಹಾಗೂ ಕುಶಾಲನಗರ ತಾಲೂಕಿಗೆ ೪೨.೯೨ ಇಂಚು ಮಳೆ ದಾಖಲಾಗಿದೆ.