ಗೋಣಿಕೊಪ್ಪಲು, ಜು. ೨೪: ಆರೋಪ ಪ್ರತ್ಯಾರೋಪದ ಮೂಲಕ ಸುದ್ದಿಯಾಗಿದ್ದ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾಗಿರುವ ದಕ್ಷಿಣ ಕೊಡಗಿನ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಿಗದಿ ಯಾಗಿದ್ದು, ತಾ. ೨೮ಕ್ಕೆ ಚುನಾವಣೆ ನಡೆಯಲಿದೆ.
ಈ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ತಮ್ಮ ತಮ್ಮ ಪಕ್ಷಗಳ ಬೆಂಬಲಿತ ಸದಸ್ಯರ ಗೆಲುವಿಗೆ ತೀವ್ರ ಕಸರತ್ತು ನಡೆಸುತ್ತಿವೆ. ವಿಶೇಷವಾಗಿ ಹುದಿಕೇರಿ ಸಹಕಾರ ಸಂಘವು ಶಾಸಕ ಎ.ಎಸ್. ಪೊನ್ನಣ್ಣ ಅವರ ತವರು ಕ್ಷೇತ್ರವಾಗಿರುವುದರಿಂದ ಸಹಜವಾಗಿಯೇ ಈ ಚುನಾವಣೆಗೆ ವಿಶೇಷ ರಂಗು ಬಂದಿದೆ. ಎರಡು ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು ಕುತೂಹಲ ಹೆಚ್ಚಿಸಿದೆ.
ಈ ಸಂಘದಲ್ಲಿ ರಸಗೊಬ್ಬರ ಮಾರಾಟದಲ್ಲಿ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪವನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷದ ಸದಸ್ಯರು ಬಹಿರಂಗವಾಗಿಯೇ ಆಡಳಿತ ಮಂಡಳಿ ವಿರುದ್ಧ ಧ್ವÀನಿ ಎತ್ತಿದ್ದರು. ಆದರೆ ರಸಗೊಬ್ಬರ ಮಾರಾಟದಲ್ಲಿ ಯಾವುದೇ ದುರುಪಯೋಗವಾಗಿಲ್ಲ ಎಂಬ ಸ್ಪಷ್ಟನೆಯನ್ನು ಅಂದಿನ ಆಡಳಿತ ಮಂಡಳಿ ತಿಳಿಸಿತ್ತು. ಎರಡು ಬಾರಿ ನಿಗದಿಗೊಂಡಿದ್ದ ಚುನಾವಣೆಯನ್ನು ನಾನಾ ಕಾರಣಗಳಿಂದ ಮುಂದೂಡಲಾಗಿತ್ತು. ಈ ವೇಳೆ ಆಡಳಿತ ಮಂಡಳಿಯು ಈ ಭಾಗದ ರೈತರಿಗೆ ಸಮಸ್ಯೆ ಎದುರಾಗಿದೆ. ಕೂಡಲೇ ಚುನಾವಣೆ ನಡೆಸುವಂತೆ ಒತ್ತಾಯಿಸಿ, ಮಡಿಕೇರಿಯ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದಾದ ಹಲವು ತಿಂಗಳ ನಂತರ ಸಂಘಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ.
ದಕ್ಷಿಣ ಕೊಡಗಿನ ಹುದಿಕೇರಿ ಕೃಷಿ ಪತ್ತಿನ
(ಮೊದಲ ಪುಟದಿಂದ) ಸಹಕಾರ ಸಂಘದಲ್ಲಿ ಸುಮಾರು ೨,೭೦೦ಕ್ಕೂ ಅಧಿಕ ಸದಸ್ಯರಿದ್ದು ಆಡಳಿತ ಮಂಡಳಿಗೆ ೧೩ ಸದಸ್ಯರು ಆಯ್ಕೆಗೊಳ್ಳ ಬೇಕಾಗಿದೆ. ಹೈಸೊಡ್ಲೂರು, ಬೆಳ್ಳೂರು, ಹುದಿಕೇರಿ, ಕೋಣಗೇರಿ, ನಡಿಕೇರಿ ಹಾಗೂ ಬೇಗೂರು ಗ್ರಾಮಗಳ ರೈತರು ಈ ಸಂಘದಲ್ಲಿ ಸದಸ್ಯರಾಗಿದ್ದಾರೆ. ೪೮೮ ಸಾಲವಿಲ್ಲದವರ ಪರ ಮತ ಚಲಾವಣೆ ಮಾಡಬೇಕಾಗಿದೆ. ಸಾಲಗಾರರ ಪರವಾಗಿ ೮೬೫ ಸದಸ್ಯರು ಮತದಾನ ಮಾಡಲಿದ್ದಾರೆ. ೧೩ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ೬ ಮಂದಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ, ಉಳಿದಂತೆ ಬಿಸಿಎಂ (ಎ)೧, ಬಿಸಿಎಂ(ಬಿ)೧ ಸಾಮಾನ್ಯ ಮಹಿಳೆ ೨, ಎಸ್ಸಿ ೧, ಎಸ್ಟಿ ೧, ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
೨ ಪಕ್ಷಗಳಿಂದ ಸದಸ್ಯರುಗಳು ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು ಈಗಾಗಲೇ ಮಳೆಯನ್ನು ಲೆಕ್ಕಿಸದೆ ಸಂಘದ ಸದಸ್ಯರ ಮನೆ ಮನೆಗೆ ತೆರಳಿ, ಮತಯಾಚನೆ ಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಸಹಜವಾಗಿಯೇ ಈ ಚುನಾವಣೆಯು ತೀವ್ರ ಕುತೂಹಲ ಮೂಡಿಸಿದೆ. ಆರಂಭದಿAದಲೂ ಈ ಸಹಕಾರ ಸಂಘವು ಬಿಜೆಪಿ ಬೆಂಬಲಿತ ಸದಸ್ಯರ ಮುಂದಾಳತ್ವದಲ್ಲಿಯೇ ಮುಂದುವರೆಯುತ್ತಿತ್ತು.
ಈ ಬಾರಿ ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬರುತ್ತಿದೆ. ಹುದಿಕೇರಿಯು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಪೊನ್ನಣ್ಣ ಅವರ ತವರು ಕ್ಷೇತ್ರವಾಗಿರುವುದರಿಂದ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯು ಕಾಂಗ್ರೆಸ್ ಪಕ್ಷಕ್ಕೆ ಅಗ್ನಿ ಪರೀಕ್ಷೆಯಾಗುವ ಎಲ್ಲಾ ಲಕ್ಷಣಗಳಿವೆ.
- ಹೆಚ್.ಕೆ. ಜಗದೀಶ್