ಕುಶಾಲನಗರ, ಜು. ೨೪: ಸರಕಾರಿ ನೌಕರನೋರ್ವ ಕುಶಾಲನಗರ- ಕೊಪ್ಪ ಕಾವೇರಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಜಿಲ್ಲಾ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅರುಣ್ ಎಂಬುವವರು ನದಿಯ ಸೇತುವೆ ಭಾಗದಿಂದ ಹಾರಿರುವುದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಬೆನ್ನಲ್ಲೇ ಕುಶಾಲನಗರ ಪಟ್ಟಣ ಪೊಲೀಸರು ಅಗ್ನಿಶಾಮಕ ಮತ್ತು ತುರ್ತು ಸೇವೆ ವಿಭಾಗದ ಸಿಬ್ಬಂದಿಗಳು ಎನ್ ಡಿ ಆರ್ ಎಫ್ ತಂಡದ ಸದಸ್ಯರು ಹಾರಿರುವ ವ್ಯಕ್ತಿಯ ಪತ್ತೆಗಾಗಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯಾಹ್ನ ಸುಮಾರು ೪ ಗಂಟೆಗೆ ಘಟನೆ ನಡೆದಿದ್ದು ಸಂಜೆತನಕ ಪತ್ತೆ ಕಾರ್ಯ ನಡೆದಿದ್ದು, ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಅರುಣ್ ಕುಶಾಲನಗರದ ಹೌಸಿಂಗ್ ಬೋರ್ಡ್ ಎರಡನೇ ಹಂತದಲ್ಲಿರುವ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದು ಕಚೇರಿಗೆ ತೆರಳುವುದಾಗಿ ಬೆಳಿಗ್ಗೆ ೯ ಗಂಟೆಗೆ ಮನೆ ಬಿಟ್ಟಿದ್ದು, ಕಚೇರಿಯಲ್ಲಿ ಗೈರು ಹಾಜರಾಗಿರುವುದು ಕಂಡು ಬಂದಿದೆ.

(ಮೊದಲ ಪುಟದಿಂದ) ಅರುಣ್ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಪಾನ ಮತ್ತನಾಗಿ ಕುಳಿತಿದ್ದ ದೃಶ್ಯವನ್ನು ಅಲ್ಲಿನ ಸಿಬ್ಬಂದಿಗಳು ಕಂಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುಮಾರು ನಾಲ್ಕು ಗಂಟೆ ವೇಳೆಗೆ ಏಕಾಏಕಿ ನದಿಯ ಸೇತುವೆ ಮೇಲೆ ಸಾಗಿ ನೀರಿಗೆ ಹಾರಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ತಪಾಸಣಾ ಕೇಂದ್ರದ ಸಿಸಿ ಕ್ಯಾಮರಾದಲ್ಲಿ ಕೂಡ ದೃಶ್ಯಾವಳಿಗಳು ಸೆರೆಯಾಗಿದ್ದು ವ್ಯಕ್ತಿಯೊಬ್ಬ ನದಿಗೆ ಹಾರಿರುವದು ಖಚಿತಗೊಂಡಿದೆ. ಈ ಸಂದರ್ಭ ಅರಣ್ಯ ತಪಾಸಣಾ ಗೇಟ್ ಬಳಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಆತನ ಬಳಿ ಓಡಿ ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. ಅರುಣ್ ಕಳೆದ ಕೆಲವು ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಯಾಗಿರುವ ಬಗ್ಗೆ ಕುಟುಂಬ ಸದಸ್ಯರು ಕುಶಾಲನಗರ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಾಗಿದೆ.

ಅರುಣ್ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಳೆದ ಕೆಲವು ಸಮಯದಿಂದ ಕುಶಾಲನಗರದಲ್ಲಿ ನೆಲೆಸಿರುವುದಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಶಾಲನಗರ ಡಿ.ವೈ.ಎಸ್.ಪಿ. ಆರ್.ವಿ. ಗಂಗಾಧರಪ್ಪ, ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಮತ್ತಿತರರ ಅಧಿಕಾರಿ ಗಳು ಭೇಟಿ ಮಾಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.