ಕೂಡಿಗೆ, ಜು. ೨೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿAದ ಗಾಳಿ, ಮಳೆಯಿಂದಾಗಿ ೩೭ ಮನೆಗಳಿಗೆ ಹಾನಿಯಾಗಿದೆ. ಈ ಸಾಲಿನ ಜೂನ್ ಮತ್ತು ಜುಲೈ ತಿಂಗಳಲ್ಲಿ ಪುನರ್ವಸು ಮಳೆಯಿಂದಾಗಿ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ೩೩ ಮನೆಗಳು, ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ೪ ಮನೆಗಳ ಗೋಡೆ ಕುಸಿತಗೊಂಡಿದೆ. ೫ ಮನೆಗಳು ಸಂಪೂರ್ಣವಾಗಿ ಮತ್ತು ೨ ಮನೆಗಳು ತೀವ್ರತರವಾಗಿ ಹಾನಿಯಾಗಿವೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನಿಯಮಾನುಸಾರ ಮತ್ತು ಕಂದಾಯ ಇಲಾಖೆಯ ಸೂಚನೆಯಂತೆ ಈ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಮನೆ ಕುಸಿತಗೊಂಡ ಫಲಾನುಭವಿಗೆ ರೂ. ೧ ಲಕ್ಷದ ೨೦ ಸಾವಿರ, ಭಾಗಶಃ ಹಾನಿಯಾದ ಫಲಾನುಭವಿಗಳಿಗೆ ನಿಯಮಗಳಡಿ ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಹಾಕಲಾಗುವುದು ಎಂದು ಕಿರಣ್ ಗೌರಯ್ಯ ಮಾಹಿತಿ ನೀಡಿದರು.

(ಮೊದಲ ಪುಟದಿಂದ) ಮಳೆಯಿಂದಾಗಿ ಹಾನಿಯಾದ ಗ್ರಾಮಗಳಿಗೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ತಂಡ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಮಗ್ರವಾದ ವರದಿ ಆಧಾರದ ಮೇಲೆ ನೋಂದಣಿ ಮಾಡಲಾಗಿದೆ. ಅದರನ್ವಯ ತಾಲೂಕು ವ್ಯಾಪ್ತಿಯ ೩೭ ಫಲಾನುಭವಿಗಳಿಗೆ ಸರಕಾರದ ಸೂಚನೆಯಂತೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಟಾಸ್ಕ್ಫೋರ್ಸ್ ಸಭೆ ನಡೆಸಿ ಅದರ ಮುಖೇನ ನದಿ ಅಂಚಿನ ಪ್ರದೇಶಗಳಲ್ಲಿರುವ ಕುಟುಂಬದವರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚನೆ ನೀಡಲಾಗಿದೆ, ಇಲಾಖಾ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅಯಾ ಗ್ರಾಮಗಳಲ್ಲಿ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆ ವತಿಯಿಂದ ಕಾವೇರಿ ನದಿ ದಂಡೆಯ ಮತ್ತು ಹಾರಂಗಿ ನದಿ ದಂಡೆಯ ಪ್ರದೇಶದ ನಿವಾಸಿಗಳಿಗೆ ವಾಹನಗಳ ಮೂಲಕ ಮುನ್ನೆಚ್ಚರಿಕೆ ಸೂಚನೆ ಸೇರಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

೨೮೦. ವಿದ್ಯುತ್ ಕಂಬಗಳಿಗೆ ಹಾನಿ

ಕುಶಾಲನಗರ ತಾಲೂಕು ವ್ಯಾಪ್ತಿಯ ಸುಂಟಿಕೊಪ್ಪ, ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ ೨೮೦ ವಿದ್ಯುತ್ ಕಂಬಗಳು ಮತ್ತು ೫ ಟ್ರಾನ್ಸ್ಫಾರ್ಮರ್‌ಗಳಿಗೆ ಹಾನಿಯಾಗಿವೆ. ಈಗಾಗಲೇ ೨೪೦ ವಿದ್ಯುತ್ ಕಂಬಗಳನ್ನು ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಸರಿಪಡಿಸಲಾಗಿದೆ. ಅಲ್ಲದೆ ತುಂಡಾದ ವಿದ್ಯುತ್ ತಂತಿಗಳನ್ನು ಬದಲಾಯಿಸಲಾಗುತ್ತಿದೆ. ಮಳೆಯ ಪ್ರಮಾಣವು ಕಡಿಮೆಯಾದ ಬಳಿಕ ಉಳಿದ ಕಂಬಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಸೆಸ್ಕ್ ಸಹಾಯಕ ಕಾರ್ಯಪಾಲಕ ಮಂಜುನಾಥ ತಿಳಿಸಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಗಾಳಿ ಮಳೆಯಿಂದಾಗಿ ಹಾನಿಯಾದ ವಿದ್ಯುತ್ ಕಂಬಗಳನ್ನು ಕಿರಿಯ ಇಂಜಿನಿಯರ್‌ಗಳಾದ. ಲವಕುಮಾರ್ ಎ., ರಾಣಿ. ಮಾರ್ಗದರ್ಶನದಲ್ಲಿ ಸಿಬ್ಬಂದಿ ವರ್ಗದವರು ಜೊತೆಗೂಡಿ ಸರಿಪಡಿಸಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ