ಚೆಯ್ಯಂಡಾಣೆ, ಜು. ೨೪: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದಿಂದ ಬಲಮುರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಕ್ಕಿಕಡವು ಎಂಬಲ್ಲಿ ರಸ್ತೆಯ ಮೋರಿ ಕುಸಿದು ವಾಹನಗಳ ಸಂಚಾರಕ್ಕೆ ತೊಡಕುಂಟಾಗಿರುವ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಕುಸಿದ ಮೋರಿಯ ದುರಸ್ತಿ ಕಾರ್ಯ ನಡೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ.

ನಾಪೋಕ್ಲು ವಿಭಾಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ನಾಪೋಕ್ಲುವಿನಿಂದ ಬೇತು ಗ್ರಾಮಕ್ಕಾಗಿ ಬಲಮುರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಕ್ಕಿಕಡವು ಎಂಬಲ್ಲಿ ಗದ್ದೆಯ ಮಧ್ಯಭಾಗದ ತೋಡಿಗೆ ಅಳವಡಿಸಿದ್ದ ಮೋರಿಯ ಮಧ್ಯಭಾಗಲ್ಲಿ ಕುಸಿದು ಅಪಾಯದ ಗುಂಡಿ ಗೋಚರಿಸಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು. ಶೀಘ್ರ ದುರಸ್ತಿಪಡಿಸಬೇಕೆಂದು ಗ್ರಾಮಸ್ಥರು ಹಾಗೂ ವಾಹನ ಚಾಲಕರು ಮಾಧ್ಯಮದ ಮೂಲಕ ಒತ್ತಾಯಿಸಿದ್ದರು. ಇದೀಗ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಸದಸ್ಯ ಕಾಳೆಯಂಡ ಸಾಬ ಅವರು ಕುಸಿದ ಮೋರಿಯ ದುರಸ್ತಿ ಕಾರ್ಯನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ರಸ್ತೆಯ ಕಾಮಗಾರಿಯನ್ನು ಈಗಾಗಲೇ ಮಳೆ ಪರಿಹಾರ ನಿಧಿ ಯೋಜನೆಗೆ ಸೇರಿಸಲಾಗಿದ್ದು ಮಳೆ ಕಡಿಮೆಯಾದ ಬಳಿಕ ಕಾಂಕ್ರಿಟ್ ಕಾಮಗಾರಿ ನಡೆಯಲಿದೆ ಎಂದು ಸಾಬ ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.