ಕುಶಾಲನಗರ, ಜು. ೨೪: ಪಟ್ಟಣ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಗಿಡಗಳ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕಾಗಿದೆ ಎಂದು ಹಿರಿಯ ವೈದ್ಯರು ಹಾಗೂ ರೋಟರಿ ಸದಸ್ಯ ಡಾ. ದೇವದಾಸ್ ಭಟ್ ಕರೆ ನೀಡಿದರು.

ಕುಶಾಲನಗರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರೋಟರಿ ಕುಶಾಲನಗರ, ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ಹೆದ್ದಾರಿ ಬದಿಯಲ್ಲಿ ನೆರಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಟ್ಟಣದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಸಂಘ-ಸAಸ್ಥೆಗಳ ಮೂಲಕ ಬೆಳೆಸಿದ ಮರ-ಗಿಡಗಳಿಗೆ ಹಾನಿಯಾಗದಂತೆ ನಾಗರಿಕರು ಎಚ್ಚರ ವಹಿಸಬೇಕು. ಪ್ರತಿಯೊಬ್ಬರೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ೨೫ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಮತ್ತು ಹೆದ್ದಾರಿ ಬದಿಯಲ್ಲಿ ನೆರಳು ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಕುಶಾಲನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳಾದ ರಾಕೇಶ್ ಮತ್ತು ವಿನೋದ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಅಧ್ಯಕ್ಷ ಸಿ.ಬಿ. ಹರೀಶ್, ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಡಾ. ಹರಿ ಶೆಟ್ಟಿ, ಎಸ್.ಕೆ. ಸತೀಶ್ ಮಾತನಾಡಿದರು.

ರೋಟರಿ ಸಂಸ್ಥೆಯ ಶೋಭಾ ಸತೀಶ್, ಪ್ರಕಾಶ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ರಾಣಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಖಜಾಂಚಿ ಕುಡೆಕಲ್ ಗಣೇಶ್, ರೋಟರಿ ಮತ್ತು ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.