ಗೋಣಿಕೊಪ್ಪಲು, ಜು. ೨೪: ಒಂದೆಡೆ ಮಳೆ ಕಾಟ ಇನ್ನೊಂದೆಡೆ ಕಾಡಾನೆ ಹಾಗೂ ವನ್ಯಜೀವಿಗಳ ಉಪಟಳ ಇವುಗಳ ಮಧ್ಯೆ ಅನ್ನದಾತನ ಗೋಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೈಗೆ ಬಂದ ಫಸಲು ಮನೆಗೆ ತಲುಪುತ್ತಿಲ್ಲ. ಕೊಡಗಿನಲ್ಲಿ ಮಳೆ ಆರಂಭವಾಗಿ ವಾರ ಕಳೆಯುತ್ತಿದ್ದಂತೆ ಕಾಫಿ ತೋಟದಲ್ಲಿ ಕಾಫಿ ಮಿಡಿಗಳು ಒಂದೇ ಸಮನೆ ಉದುರಲಾರಂಭಿಸಿದೆ. ಇನ್ನೂ ಕೂಡ ಮಳೆ ಮುಂದುವರೆಯುವ ಲಕ್ಷಣಗಳಿವೆ. ಈಗಲೇ ಹೀಗಾದರೆ ಮುಂದಿನ ಪರಿಸ್ಥಿತಿ ಏನಾಗ ಬಹುದೆಂದು ಇಲ್ಲಿನ ರೈತ ಕಂಗಾಲಾಗಿದ್ದಾನೆ.
ಕಾಫಿ ತೋಟದ ಮಾಲೀಕರು, ರೈತರು ಒಂದಲ್ಲ ಒಂದು ಸಮಸ್ಯೆಯಿಂದ ನಿರಂತರ ನಷ್ಟ ಅನುಭವಿಸುತ್ತಿರುವ ದ.ಕೊಡಗಿನ ಬಹುತೇಕ ರೈತರಿಗೆ ಇದೀಗ ರೈತರ ಪ್ರಮುಖ ಬೆಳೆಯಾದ ಕಾಫಿ ಬೆಳೆಗೆ ಕೊಳೆರೋಗ ಬಾಧೆ ಕಂಡು ಬಂದಿದೆ. ಇದರಿಂದಾಗಿ ರೈತರ ತೋಟದಲ್ಲಿ ಮಿಡಿಗಳು ನೆಲಕ್ಕುರುಳುತ್ತಿವೆ. ದಕ್ಷಿಣ ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಮಸ್ಯೆ ಉಲ್ಬಣವಾಗಿದೆ.
ರೈತನಿಗೆ ವಾರ್ಷಿಕ ಬೆಳೆಯಾಗಿ ಸಿಗುತ್ತಿರುವ ಕಾಫಿ ಬೆಳೆಯನ್ನು ನಂಬಿ ಬ್ಯಾಂಕ್‌ಗಳಲ್ಲಿ ಸಾಕಷ್ಟು ರೈತರು ಸಾಲ ಪಡೆದಿದ್ದಾರೆ. ಪಡೆದ ಸಾಲವನ್ನು ಇಂತಹ ಬೆಳೆಗಳಿಗೆ ವ್ಯಯ ಮಾಡಿದ್ದಾರೆ. ವಾರ್ಷಿಕವಾಗಿ ಬ್ಯಾಂಕ್‌ಗಳಿAದ ಪಡೆಯುವ ಸಾಲವನ್ನು ಮರುಪಾವತಿಸಲು ಕಾಫಿಯನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ರೈತರು ಸಿಲುಕಿದ್ದಾರೆ. ಆದರೆ ಇದೀಗ ಕೊಳೆ ರೋಗದಿಂದ ಕಾಫಿ ಉದುರುತ್ತಿರುವುದರಿಂದ ರೈತ ನಂಬಿದ್ದ ಕಾಫಿ ಫಸಲು ಮುಂದಿನ ದಿನಗಳಲ್ಲಿ ಕೈ ಸೇರುವುದು ಅನುಮಾನವಾಗಿದೆ.
ವಿಪರೀತವಾಗಿ ಸುರಿದ ಮಳೆಯಿಂದಾಗಿ ಶೀತ ಹೆಚ್ಚಾಗಿದ್ದು ಕಾಯಿಕಟ್ಟಲು ಆರಂಭಿಸಿದ್ದ ಕಾಫಿ ಮಿಡಿಗಳು ಒಂದೇ ಸಮನೆ ಉದುರುತ್ತಿದೆ. ಮಳೆ ಇರುವ ಹಿನ್ನೆಲೆಯಲ್ಲಿ ತೋಟದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುವುದು ಕಷ್ಟವಾಗಿದೆ.
-ಹೆಚ್.ಕೆ. ಜಗದೀಶ್