ಚೆಯ್ಯಂಡಾಣೆ, ಜು. ೨೪: ಕಳೆದ ಹತ್ತು ಹದಿನೈದು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆ, ಗಾಳಿಯಿಂದ ಕೊಡಗಿನ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ.

ಒಂದೆಡೆ ವಿದ್ಯುತ್ ಸಮಸ್ಯೆ ಮತ್ತೊಂದೆಡೆ ಕಾಡಾನೆ ಸಮಸ್ಯೆ. ಇದರ ಜೊತೆಗೆ ಬೆಳೆಗಾರರಲ್ಲಿ ಮತ್ತೊಂದು ದೊಡ್ಡ ಸಮಸ್ಯೆ ತಲೆದೋರಿದ್ದು ಪ್ರಮುಖ ಬೆಳೆಯಾದ ಕಾಫಿ ಹಣ್ಣಿನ ಸಮಸ್ಯೆ.

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ-ಗಾಳಿಗೆ ಕೋಕೇರಿ ಗ್ರಾಮದಲ್ಲಿ ಕೊಳೆ ರೋಗಕ್ಕೆ ತುತ್ತಾಗಿ ಕಾಫಿ ನೆಲಕ್ಕೆ ಉದುರುತ್ತಿವೆ. ಅದಲ್ಲದೆ ಈ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಗಾಳಿ-ಮಳೆಗೆ ದೊಡ್ಡ, ದೊಡ್ಡ ಮರಗಳು ಹಾಗೂ ಮರದ ಕೊಂಬೆಗಳು ಕಾಫಿ ಗಿಡದ ಮೇಲೆ ಬಿದ್ದು ಗಿಡಗಳಿಗೆ ಹಾನಿಯಾಗಿದೆ.

ರೈತರ ಕೈಗೆ ಪ್ರಮುಖವಾಗಿ ವರ್ಷಕ್ಕೆ ಒಂದೇ ಬಾರಿ ಸಿಗುವಂತಹ ಬೆಳೆ ಇದಾಗಿದ್ದು, ಈ ಬೆಳೆಯನ್ನೇ ನಂಬಿ ಜೀವನ ಸಾಗಿಸುವ ರೈತರು ಹೆಚ್ಚಿದ್ದಾರೆ. ವರ್ಷದ ೩೬೫ ದಿನ ರೈತರು ಇದನ್ನೇ ನಂಬಿ ಬದುಕು ಸಾಗಿಸುತ್ತಾರೆ. ರೈತರನ್ನು ನಂಬಿ ಕಾರ್ಮಿಕರು ಸಹ ಜೀವನ ಸಾಗಿಸುತ್ತಿದ್ದಾರೆ.

ಒಂದೆಡೆ ಕುಟುಂಬದ ನಿರ್ವಹಣೆ, ತೋಟದ ಖರ್ಚು, ಬ್ಯಾಂಕ್ ಸಾಲ ಹಾಗೂ ಇತರ ಖರ್ಚುಗಳು ಕೂಡ ಇರುತ್ತವೆ. ಮುಂದಿನ ದಿನಗಳಲ್ಲಿ ಕಾಫಿ ಬೆಳೆ ಹಾಗೂ ತೋಟವನ್ನು ಕೈ ಬಿಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಾರೆ ಈ ವ್ಯಾಪ್ತಿಯ ಗ್ರಾಮಸ್ಥರು.

ಇದರಿಂದ ಮಾರುಕಟ್ಟೆಗೆ ಬರುವ ಕಾಫಿಯ ಪ್ರಮಾಣ ಕಡಿಮೆಯಾಗಿದೆ, ಸರಕಾರಕ್ಕೆ ಬರುವ ಆದಾಯ ಕೂಡ ಕುಂಠಿತಗೊಳ್ಳುತ್ತದೆ ಎನ್ನುತ್ತಾರೆ ರೈತರು. ರೈತರ ಹಾಗೂ ಕಾರ್ಮಿಕರ ಬದುಕು ಹೇಳತೀರದಷ್ಟು ಕಷ್ಟಕರವಾಗಿ ಪರಿಣಮಿಸಿದೆ.

ರೈತರೇ ದೇಶದ ಬೆನ್ನೆಲುಬು ಅನ್ನುತ್ತಾರೆ, ಆದರೆ ರೈತನ ಬೆನ್ನೆಲುಬೇ ಕೃಷಿ, ಅತಿವೃಷ್ಟಿಯಿಂದ ತುಂಬಲಾರದ ನಷ್ಟವಾದರೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಸರಕಾರ ರೈತರ ಏಳಿಗೆಗೆ, ದೇಶದ ಅಭಿವೃದ್ಧಿಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಆದಷ್ಟು ಶೀಘ್ರ ನಷ್ಟ ಹೊಂದಿದವರಿಗೆ ಗರಿಷ್ಠ ಪ್ರಮಾಣದ ಪರಿಹಾರ ಹಾಗೂ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರವನ್ನು ರೈತಾಪಿ ವರ್ಗ ಹಾಗೂ ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.

- ಅಶ್ರಫ್