ಪೊನ್ನಂಪೇಟೆ, ಜು. ೨೪: ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ೪೫ನೇ ಹುತಾತ್ಮರ ದಿನಾಚರಣೆಯನ್ನು ಗೋಣಿಕೊಪ್ಪಲಿನ ರೈತ ಸಂಘದ ಕಚೇರಿಯಲ್ಲಿ ಆಚರಿಸಲಾಯಿತು.

ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮರಿಗೆ ರೈತ ಸಂಘದ ಪ್ರಮುಖರು ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ರೈತ ಸಂಘದ ಜಿಲ್ಲಾ ಪ್ರಧಾನ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ, ನರಗುಂದದಲ್ಲಿ ನಡೆದ ಹತ್ಯೆಯಲ್ಲಿ ಭಾಗವಹಿಸಿ, ಹುತಾತ್ಮರಾದ ರೈತ ನಾಯಕರನ್ನು ಸ್ಮರಿಸಿದರು.

ರಾಜ್ಯದ ಹಲವು ಭಾಗಗಳಲ್ಲಿ ರೈತ ಸಂಘಟನೆಗಳು ರೈತರ ಪರವಾಗಿ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದರೂ, ಹಲವು ಸಮಸ್ಯೆಗಳು ಇಂದಿಗೂ ನಿವಾರಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ರೈತರು ಬೆಳೆದಂತಹ ಬೆಳೆಗೆ ಹೋರಾಟ ಮಾಡಿ ಫಲವನ್ನು ಪಡೆಯುವಂತಹ ಸನ್ನಿವೇಶ ಎದುರಾಗಿದೆ. ಕಾಡು ಪ್ರಾಣಿಗಳಿಂದ ರೈತರ ಬೆಳೆನಷ್ಟವಾಗುತ್ತಿದ್ದರೂ ಕೂಡಾ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ವಿಷಾದಿಸಿದರು.

ಈ ಸಂದರ್ಭ ರೈತ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಭವಿ ಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳಲೆ ಹೋಬಳಿ ಅಧ್ಯಕ್ಷ ಕಿಶಾ ಮಾಚಯ್ಯ, ಕಾರ್ಮಾಡ್ ಅಧ್ಯಕ್ಷ ಲೇಹರ್, ನಲ್ಲೂರು ಗ್ರಾಮ ರೈತ ಸಂಘದ ಅಧ್ಯಕ್ಷ ರಾಜ ಕರುಂಬಯ್ಯ , ಪೊನ್ನಂಪೇಟೆ ಘಟಕದ ಅಧ್ಯಕ್ಷ ಮನು, ತಿತಿಮತಿ ಗ್ರಾಮದ ಸಣ್ಣುವಂಡ ಗಣೇಶ್, ಕಿಶೋರ್ ಮಾಚಯ್ಯ, ಮಾರಮಾಡ ಪ್ರೇಮ್, ಪೂಣಚ್ಚ, ಹರಿದಾಸ್, ಸಿ. ಬಿ ಪೂಣಚ್ಚ, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.