ಮುಳ್ಳೂರು, ಜು. ೨೪: ಮುಂದಿನ ದಿನದಲ್ಲಿ ಕೃಷಿ ಪತ್ತಿನ ಸಹಕಾರ ಸಂಘವು ಸಂಘದ ಸದಸ್ಯರುಗಳಿಗೆ ಗುಂಪು ಸಾಲವಾಗಿ ರೂ. ೫ ಲಕ್ಷ ವರೆಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಲು ಉದ್ದೇಶಿಸಿದೆ ಎಂದು ಸಮಿಪದ ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಶರತ್ ಶೇಖರ್ ಹೇಳಿದರು.

ಸಂಘದ ಸಭಾಂಗಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಉನ್ನತ್ತೀಕರಣಕ್ಕೆ ಸಹಕಾರಿ ಸದಸ್ಯರು ಕೈಜೋಡಿಸಬೇಕು. ನಮ್ಮ ಸಹಕಾರ ಸಂಘವು ಸಂಘದ ಸದಸ್ಯರಿಗೆ ಬೆಳೆಸಾಲ ಮಾತ್ರವಲ್ಲದೆ ೧ ಲಕ್ಷದವರೆಗೆ ಜಾಮೀನು ಸಾಲ, ೮ ಲಕ್ಷದವರೆಗೆ ಗೊಬ್ಬರ ಸಾಲವನ್ನು ನೀಡುತ್ತಿದೆ. ಮುಂದಿನ ದಿನದಲ್ಲಿ ನಮ್ಮ ಸಂಘವು ಸಂಘದ ಸದ್ಯರಿಗೆ ಗುಂಪು ಸಾಲವಾಗಿ ೫ ಲಕ್ಷ ರೂ. ವರೆಗೆ ನೀಡಲು ಉದ್ದೇಶಿಸಿದ್ದು, ಪ್ರಾರಂಭಿಕವಾಗಿ ಗುಂಪು ಸಾಲವಾಗಿ ಎರಡೂವರೆ ಲಕ್ಷ ನೀಡಲು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದೆ. ನಮ್ಮ ಸಂಘವು ಈ ಸಾಲಿನಲ್ಲಿ ಕಳೆದ ಸಾಲಿಕಿಂತ ಹೆಚ್ಚಿನ ಪ್ರಗತಿ ಸಾಧಿಸಿದೆ. ಸಂಘವು ಪ್ರಗತಿ ಸಾಧಿಸಿದೆ ಹಿನ್ನೆಲೆಯಲ್ಲಿ ಕೇಂದ್ರ ಸಹಕಾರ ಬ್ಯಾಂಕ್ ನಮ್ಮ ಸಂಘಕ್ಕೆ ೧ ಲಕ್ಷ ರೂ. ಅನುದಾನ ನೀಡಿ ಪ್ರೋತ್ಸಾಹಿಸಿದೆ ಎಂದರು.

ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀತುಚಂದ್ರ ವಾರ್ಷಿಕ ವರದಿ ಮಂಡಿಸಿದರು. ಸಂಘದಲ್ಲಿ ೨೦೨೩-೨೪ನೇ ಸಾಲಿನಲ್ಲಿ ೨೦೧೧ ಮಂದಿ ಸದಸ್ಯರಿದ್ದು ಸದಸ್ಯರ ಪಾಲುಹಣ ರೂ. ೧,೪೨,೩೭,೧೧೮ ಇದ್ದು ಕ್ಷೇಮನಿಧಿ, ಕಟ್ಟಡನಿಧಿ, ಇತರೆ ನಿಧಿಗಳಿಂದ ರೂ. ೩,೧೮,೭೬,೬೦೭ ಇದೆ ಎಂದು ವರದಿಯಲ್ಲಿ ಮಂಡಿಸಲಾಯಿತು. ಸಂಘವು ಡಿಸಿಸಿ ಬ್ಯಾಂಕಿನಿAದ ವಿವಿಧ ಸಾಲವಾಗಿ ರೂ. ೯,೩೭,೧೯,೧೪೨ ಪಡೆದುಕೊಂಡಿದ್ದು, ಸಂಘದ ಮತ್ತೊಂದು ಶಾಖೆಯ ಮೂಲಕ ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಮಾರಾಟದ ಮೂಲಕ ರೂ. ೨,೬೪,೭೦,೨೦೨ ವ್ಯಾಪಾರ ವಹಿವಾಟು ನಡೆಸಿರುವ ಬಗ್ಗೆ ವರದಿಯಲ್ಲಿ ಮಂಡಿಸಲಾಯಿತು. ಸಭೆಯಲ್ಲಿ ಸಹಕಾರಿ ಸದಸ್ಯರು ಸಂಘದ ಪ್ರಗತಿಯ ಬಗ್ಗೆ ಚರ್ಚಿಸಿದರು. ಮಹಾಸಭೆಯಲ್ಲಿ ಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಂಘದ ಅಧ್ಯಕ್ಷ ಎಸ್.ಸಿ. ಶರತ್‌ಶೇಖರ್ ಅವರನ್ನು ಸಹಕಾರಿ ಸದಸ್ಯರು ಸನ್ಮಾನಿಸಿದರು. ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಸವಿತಾ ಸತೀಶ್, ನಿರ್ದೇಶಕರಾದ ಟಿ.ಆರ್. ಗಿರೀಶ್, ಜೆ.ಸಿ. ಲೋಕೇಶ್, ಬಿ.ಕೆ. ಚಂದ್ರು, ಕೆ.ಪಿ. ಪುಷ್ಪ, ಡಿ.ಇ. ಬಸಪ್ಪ, ಎಸ್.ಎನ್. ರಘು, ಸಿ.ಜೆ.ಗಿರೀಶ್, ಎಸ್.ಯು. ಆನಂದ್, ಎ.ಆರ್. ರಕ್ಷಿತ್ ಶನಿವಾರಸಂತೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್‌ಕುಮಾರ್, ಕೆ.ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ಎಲ್.ಕೆ.ರಮೇಶ್, ಸಂಘದ ಪ್ರಥಮ ದರ್ಜೆ ಗುಮಾಸ್ತರಾದ ಜಿ.ಎನ್. ಅಶೋಕ್, ಎಂ.ದೀಪಕ್ ಹಾಗೂ ಸಂಘದ ಸಿಬ್ಬಂದಿ ಹಾಜರಿದ್ದರು.