ಮಡಿಕೇರಿ. ಜು. ೨೪: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪುನರ್ವಸತಿ ಬಡಾವಣೆಯಲ್ಲಿ ೧೫ ದಿನದಿಂದ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನರು ಹೈರಾಣಾಗಿದ್ದಾರೆ. ಇಲ್ಲಿಗೆ ತಾ. ೨೧ರಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಹಾಗೂ ಶಾಸಕ ಮಂತರ್ ಗೌಡ ಸೇರಿದಂತೆ ಜಿಲ್ಲಾಧಿಕಾರಿ ಮತ್ತು ಇತರ ಇಲಾಖೆಗಳ ಅಧಿಕಾರಿಗಳ ತಂಡ ಖುದ್ದು ಭೇಟಿ ನೀಡಿ ಪರಿಶೀಲಿಸಿತು. ನಂತರವೂ ಯಾವುದೇ ಸಮಸ್ಯೆ ಪರಿಹಾರ ಕಂಡಿಲ್ಲ. ಎಂದಿನAತೆ ಕಳೆದ ೧೫ ದಿನಗಳಲ್ಲಿ ಕುಡಿಯುವ ನೀರು ಪೂರೈಕೆ ಇಲ್ಲದೆ ಜನರು ಮಳೆ ನೀರನ್ನು ಅವಲಂಬಿಸಿದ್ದಾರೆ. ವಿದ್ಯುತ್ ಕಣ್ಣು ಮುಚ್ಚಾಲೆ ನಡುವೆ ಮಳೆ, ಗಾಳಿ ಚಳಿಯಿಂದ ಜನರು ಕಂಗಾಲಾಗಿದ್ದಾರೆ.
(ಮೊದಲ ಪುಟದಿಂದ) ಮಾದಾಪುರ ಗ್ರಾಮ ಪಂಚಾಯಿತಿ ಆಡಳಿತ ಕೂಡ ನಿರ್ಲಕ್ಷö್ಯ ತೋರುತ್ತಿದೆ ಎಂಬ ಆಕ್ರೋಶ ಜನತೆಯಿಂದ ವ್ಯಕ್ತಗೊಳ್ಳತೊಡಗಿದೆ.
೨೦೨೦ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮನೆಗಳ ನಿರ್ಮಾಣ ಮಾಡಲಾಯಿತು. ಆದರೆ, ಮಾದಾಪುರ ಗ್ರಾಮ ಪಂಚಾಯಿತಿ ಈ ಮನೆಗಳು ಸ್ವಾಧೀನಕ್ಕೆ ನೀಡಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿದೆ. ಯಾವುದೇ ಸಮಸ್ಯೆ ಕೇಳಲು ತಯಾರಿಲ್ಲ. ಬದಲಾಗಿ ಫಲಾನುಭವಿಗಳ ಮೇಲೆ ಕುರುಡು ದರ್ಬಾರ್ ಮೆರೆಯುತ್ತಿದೆ ಎಂಬುದು ನಿವಾಸಿಗಳ ಆರೋಪವಾಗಿದೆ.
ಈ ಮನೆಗಳಿಗೆ ಮೂಲಭೂತ ಸೌಕರ್ಯದ ಕೊರತೆಯಿಂದ ಅನೇಕರು ಬಾಗಿಲು ಹಾಕಿ ಬೇರೆಡೆ ನೆಲೆಸಿರುವ ದೃಶ್ಯ ಕಾಣುತ್ತದೆ. ಅಂಥವರು ಇಲ್ಲಿಯೇ ವಾಸ್ತವ್ಯ ಹೂಡಲು ಗ್ರಾಮ ಪಂಚಾಯಿತಿ ತಾಕೀತು ಮಾಡಿದೆ. ಅಲ್ಲದೆ ಮನೆ ಕಂದಾಯ ಹಾಗೂ ನೀರಿನ ಕಂದಾಯ ಸೇರಿದಂತೆ ಪ್ರತಿ ವರ್ಷ ರೂಪಾಯಿ ಸಾವಿರಕ್ಕಿಂತ ಅಧಿಕ ವಸೂಲಿ ಮಾಡುತ್ತಿದೆ. ಬದಲಾಗಿ ಸಮಸ್ಯೆ ಕೇಳಲು ಯಾರೂ ಇಲ್ಲ. ಮಾದಾಪುರ ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಓ ಇಲ್ಲ. ಬೇರೆಡೆಯಿಂದ ನಿಯೋಜನೆಗೊಂಡಿದ್ದು, ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಅಲ್ಲದೆ ಈ ಬಡಾವಣೆಗೆ ಜನಪ್ರತಿನಿಧಿಗಳೂ ಇಲ್ಲ. ಹೀಗಾಗಿ ಏನೇ ಸಣ್ಣ ಪುಟ್ಟ ಸಮಸ್ಯೆಗೂ ಶಾಸಕರನ್ನು ಅವಲಂಭಿಸಬೇಕಾದ ಪರಿಸ್ಥಿತಿ ತಲೆದೋರಿದೆ.
ಇನ್ನು ವಿದ್ಯುತ್ ಏನಿದ್ದರೂ ಸುಂಟಿಕೊಪ್ಪ ಅಥವಾ ಮಡಿಕೇರಿಯಲ್ಲಿ ದೂರು ನೀಡಿ ಎಂದು ಇಲಾಖೆಯ ಮಂದಿಯ ಉತ್ತರ ಆಗಿದ್ದು, ಜನರಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.
ಅವೈಜ್ಞಾನಿಕ ಶೌಚಾಲಯ ಕಾಮಗಾರಿ ಹಾಗೂ ವಿದ್ಯುತ್, ನೀರಿನ ತೊಂದರೆ ನಡುವೆ ಜಂಬೂರು ಪುನರ್ವಸತಿ ಬಡಾವಣೆಯ ನಿವಾಸಿಗಳಿಗೆ ಅನಾಥ ಪ್ರಜ್ಞೆ ಕಾಡತೊಡಗಿದೆ. ಖುದ್ದು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಇನ್ನೂ ಕೂಡ ಸಮಸ್ಯೆ ಬಗೆಹರಿದಿಲ್ಲ.
- ಶ್ರೀ ಸುತ.