ಕಣಿವೆ, ಜು. ೨೪: ನಂಜರಾಯಪಟ್ಟಣ ಗ್ರಾಮಸಭೆಯಲ್ಲಿ ಚಿಕ್ಲಿಹೊಳೆಯಿಂದ ಉಂಟಾಗುತ್ತಿರುವ ಅನಾನುಕೂಲತೆ ಬಗ್ಗೆ ಚರ್ಚೆ ನಡೆಯಿತು. ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಅಧ್ಯಕ್ಷತೆಯಲ್ಲಿ ಹೊಸಪಟ್ಟಣ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಚಿಕ್ಲಿಹೊಳೆ ಜಲಾಶಯ ಯೋಜನೆ ಯಿಂದ ಸ್ಥಳೀಯರಿಗೆ ಅಪಾರ ಪ್ರಮಾಣದ ಅನಾನುಕೂಲತೆ ಗಳಾಗುತ್ತಿವೆ. ಜಲಾಶಯದ ಯಾವುದೇ ಕಾಲುವೆಗಳು ಸಮರ್ಪಕವಾಗಿಲ್ಲ. ಕಾಲುವೆಗಳ ಹೂಳು ತೆಗೆದಿಲ್ಲ. ಈ ಯೋಜನೆ ರೈತರಿಗೆ ಇರುವುದೋ ಅಥವಾ ಇಲ್ಲ ಪ್ರವಾಸಿಗರಿಗೆ ಇರುವುದೋ ಎಂದು ಜೇನು ಕುರುಬರ ಮುಖಂಡ ಜೆ.ಟಿ. ಕಾಳಿಂಗ ಪ್ರಶ್ನಿಸಿದರು.

ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದ್ದರೂ ಕೂಡ ಇದೂವರೆಗೂ ಕಾಲುವೆಗಳನ್ನು ಸರಿ ಮಾಡಿಲ್ಲ. ರಸ್ತೆಗಳೂ ಸರಿಯಾಗಿಲ್ಲ. ಇವರು ನೀರು ಬಿಡೋದು ಯಾವಾಗ ? ನಾವು ಭತ್ತ ಬಿತ್ತನೆ ಮಾಡೋದು ಯಾವಾಗ ?

ನಿಮಗೆ ಬದ್ಧತೆ ಇದ್ದರೆ ರೈತರಿಗೆ ಅನುಕೂಲ ಮಾಡುವ ಯೋಜನೆ ರೂಪಿಸಿ. ಇಲ್ಲವೇ ಇಲಾಖೆ ಬಿಟ್ಟು ತೆರಳಿ ಎಂದು ರಂಗಸಮುದ್ರದ ನಿವಾಸಿ ಮಾವಾಜಿ ರವಿ, ಕೆಮ್ಮಾರನ ಲೋಕೇಶ್, ಸೆಟ್ಟೆಜನ ಗಿರೀಶ್, ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಸಿ.ಎಲ್. ವಿಶ್ವ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಳಿದಿರುವ ಹೂಳು ತೆಗೆದು, ಕಾಲುವೆಗಳಲ್ಲಿ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು.

ಚಿಕ್ಲಿಹೊಳೆ ಜಲಾಶಯದ ಅಣೆಕಟ್ಟೆಯ ಮೇಲೆ ಸ್ಥಳೀಯರಲ್ಲದ ಕೆಲವು ಮಂದಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಕೂಡಲೇ ಈ ಅಂಗಡಿಗಳನ್ನು ತೆರವು ಗೊಳಿಸಬೇಕು. ಸ್ಥಳೀಯ ಕಡುಬಡ ಕುಟುಂಬದ ಮಂದಿಗೆ ಅವಕಾಶ ಕಲ್ಪಿಸಬೇಕು. ಚಿಕ್ಲಿಹೊಳೆ ಜಲಾಶಯ ಅಣೆಕಟ್ಟೆಯ ಮೇಲಿನ ನಿರ್ವಹಣೆಯನ್ನು ಇಲಾಖೆಯವರು ಸರಿಯಾಗಿ ಮಾಡಬೇಕು. ಇಲ್ಲದಿದ್ದರೆ ಪಂಚಾಯಿತಿಗೆ ಬಿಡಿ ಎಂದು ನಿಗಮದ ಅಭಿಯಂತರ ಕಿರಣ್ ಅವರ ಮೂಲಕ ಇಲಾಖೆಗೆ ಪಂಚಾಯಿತಿ ಅಧ್ಯಕ್ಷ ವಿಶ್ವ ತಾಕೀತು ಮಾಡಿದರು.

ಸಭೆಯಲ್ಲಿ ಕೇಳಿಬಂದ ಚಿಕ್ಲಿಹೊಳೆ ಯೋಜನೆಯ ಸಮಸ್ಯೆಗಳನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಕಿರಿಯ ಅಭಿಯಂತರ ಕಿರಣ್ ಹೇಳಿದರು.

ಚಿಕ್ಲಿಹೊಳೆ ಯೋಜನೆಯ ಉಳಿವು ಹಾಗೂ ರೈತರಿಗೆ ಆಗಬೇಕಾದ ಪ್ರಯೋಜನಗಳ ಬಗ್ಗೆ ಸ್ಥಳೀಯರು ಒಮ್ಮತದ ತೀರ್ಮಾನ ಕೈಗೊಳ್ಳುವ ಬಗ್ಗೆ ಪಂಚಾಯಿತಿ ಸದಸ್ಯರಾದ ಅಯ್ಯಂಡ್ರ ಲೋಕನಾಥ್ ಸಭೆಯಲ್ಲಿ ಸಲಹೆ ನೀಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಜಾನುವಾರುಗಳಿದ್ದು ಪಶುಪಾಲನಾ ವೈದ್ಯ ಸಿಬ್ಬಂದಿಗಳಿಲ್ಲದೇ ಸರಿಯಾದ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮದ ಸಚಿನ್ ದೂರಿದಾಗ, ಪಶುಪಾಲನಾ ಇಲಾಖೆಯ ಸಿಬ್ಬಂದಿ ಸುರೇಶ್ ಮಾತನಾಡಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ೧೯೬೨ ನಂಬರ್‌ಗೆ ರೈತರು ಕರೆ ಮಾಡಿದರೆ ಸರ್ಕಾರದ ಉಚಿತ ತಪಾಸಣೆಯ ವಾಹನದೊಂದಿಗೆ ಸಿಬ್ಬಂದಿಗಳು ಮನೆಗೆ ಧಾವಿಸಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದರು.

ಹೊಸಪಟ್ಟಣದಲ್ಲಿನ ಕೆರೆಯ ಜಾಗ ಒತ್ತುವರಿಯಾಗಿದೆ. ಕೂಡಲೇ ಕೆರೆಯ ಒತ್ತುವರಿ ತೆರವುಗೊಳಿಸ ಬೇಕೆಂದು ಶಾಂತಕುಮಾರ್ ಹಾಗೂ ಹೆಚ್.ಎಂ. ಸ್ವಾಮಿ ಗ್ರಾಮ ಲೆಕ್ಕಾಧಿಕಾರಿ ಸಚಿನ್ ಅವರಲ್ಲಿ ಕೋರಿದಾಗ, ಸರ್ಕಾರಿ ಜಾಗ ಅತಿಕ್ರಮಣವಾಗಿದ್ದರೆ ತೆರವುಗೊಳಿಸ ಲಾಗುವುದು ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಅನೇಕ ಕಡೆಗಳಲ್ಲಿ ಹಲವು ಬಡ ಮಂದಿಯ ಮನೆಗಳು ಕುಸಿದಿವೆ.

ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲ ಸಲ್ಲದ ಸಬೂಬು ಹೇಳಿ ಅನಧಿಕೃತ ಮನೆಗಳು ಎಂದು ತಳ್ಳಿ ಹಾಕಲಾಗುತ್ತಿದೆ. ಹೀಗಿರುವಾಗ ಜಿಲ್ಲಾಧಿಕಾರಿ ಬಳಿ ಮಳೆ ಹಾನಿಗೆಂದು ಕೋಟಿಗಟ್ಟಲೆ ಹಣವಿದ್ದು ಪ್ರಯೋಜನವೇನು?

ಅಧಿಕಾರಿಗಳು ಮಾನವೀಯತೆ ದೃಷ್ಟಿಯಿಂದ ಅಮಾಯಕ ಬಡವರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ವಿಶ್ವ ಕೋರಿದರು.

ಆಹಾರ ಇಲಾಖೆಯ ಅನ್ನಭಾಗ್ಯ, ಪಡಿತರ ಇತರೇ ಪ್ರಯೋಜನಗಳನ್ನು ಪಡೆಯಲು ಎಲ್ಲಾ ಕಡೆಗಳಲ್ಲಿ ಸರ್ವರ್ ಸಮಸ್ಯೆ ಇದೆ. ಗ್ರಾಮ ಒನ್ ಕೇಂದ್ರಗಳಿAದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದಾಗ, ಸರ್ವರ್ ಸಮಸ್ಯೆ ಕೆಲವೇ ದಿನಗಳಲ್ಲಿ ಬಗೆಹರಿಯುವ ಬಗ್ಗೆ ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ತಿಳಿಸಿದರು.

ಪಂಚಾಯಿತಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.

ಸಭೆಗೆ ಕೇವಲ ಒಂದು ವಿಭಾಗದ ಸಹಾಯಕ ಅಧಿಕಾರಿಗಳು ಮಾತ್ರ ಬರುತ್ತಾರೆ. ಅಂತಹವರ ಬಳಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದೇ; ಅರಣ್ಯ ಹಕ್ಕು ಪತ್ರಗಳನ್ನು ಜೇನು ಕುರುಬರಿಗೆ ಸರ್ಕಾರ ವಿತರಿಸದ ಕಾರಣ ಕಾಡಾನೆಗಳಿಂದ ಆಗುವ ಹಾನಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ. ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆದು ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸಬೇಕು ಎಂದು ಜೇನು ಕುರುಬರ ಮುಖಂಡರಾದ ಜೆ.ಟಿ. ಕಾಳಿಂಗ ಹಾಗೂ ಆರ್.ಕೆ. ಚಂದ್ರು ಒತ್ತಾಯಿಸಿದಾಗ ಸಭೆ ಅನುಮೋದಿಸಿ ಪತ್ರ ಬರೆಯಲು ತೀರ್ಮಾನಿಸಿತು.

ನಂಜರಾಯಪಟ್ಟಣದ ದಾಸವಾಳದಿಂದ ಕಾವೇರಿ ನದಿ ದಂಡೆಯವರೆಗೂ ಪ್ರವಾಸಿಗರು ತಂದು ಬಿಸಾಕಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಜನವಸತಿ ಪ್ರದೇಶ ಕಸದ ತೊಟ್ಟಿಯಾಗಿದೆ. ಕೂಡಲೇ ಸ್ವಚ್ಛತೆಗೆ ಒತ್ತು ನೀಡಬೇಕೆಂದು ಗ್ರಾಮದ ಸಚಿನ್ ಒತ್ತಾಯಿಸಿದರು.

ಅಧ್ಯಕ್ಷ ವಿಶ್ವ ಮಾತನಾಡಿ, ಪಂಚಾಯಿತಿಗೆ ಈ ಹಿಂದೆ ಕೇವಲ ೧೫ ಲಕ್ಷ ಅನುದಾನ ಬರುತ್ತಿತ್ತು. ಆದರೆ ನಾವು ಈ ಬಾರಿ ಸ್ವ ಪ್ರಯತ್ನದಿಂದಾಗಿ ಪಂಚಾಯಿತಿಗೆ ಒಂದು ಕೋಟಿ ಆದಾಯ ಬರುವಂತೆ ಮಾಡಿ ಕೊಂಡಿದ್ದೇವೆ. ಹಾಗಾಗಿ ಪಂಚಾಯಿತಿ ವ್ಯಾಪ್ತಿಯ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದರು.

ಕೆಲವರು ನೆಲ್ಲಿಹುದಿಕೇರಿ ಗ್ರಾಮವನ್ನು ಹೋಬಳಿ ಮಾಡಬೇಕೆಂದು ಒಡಾಡುತ್ತಿದ್ದಾರೆ. ಆದರೆ ನಂಜರಾಯಪಟ್ಟಣವನ್ನು ಹೋಬಳಿ ಕೇಂದ್ರ ಮಾಡಿದಲ್ಲಿ ಸುತ್ತಲಿನ ಗ್ರಾಮಗಳ ಮಂದಿಗೆ ಹೆಚ್ಚು ಅನುಕೂಲವಾಗುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವ ನಿರ್ಣಯವನ್ನು ವಿಶ್ವ ಮಂಡಿಸಿದರು.

ಪ್ರವಾಸಿಗರು ಹೆಚ್ಚು ಧಾವಿಸುವ ದುಬಾರೆ ಪ್ರವಾಸಿ ತಾಣದ ಬಳಿ ತೂಗು ಸೇತುವೆ ನಿರ್ಮಾಣ ಮಾಡುವುದರಿಂದ ಅಲ್ಲಿನ ಪ್ರವಾಸಿಗರಿಗೆ ಹಾಗೂ ಗಿರಿಜನ ವಾಸಿಗಳಿಗೆ ಅನುಕೂಲವಾಗಲಿದ್ದು ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು. ಸಭೆಯ ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಕಾರ್ಯನಿರ್ವಹಿಸಿದರು.

ಸಭೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಸ್ವಾತಿ, ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ದಂಡಿನ ಡಿ. ಕಿರಣ್, ಅರಣ್ಯ ಇಲಾಖೆಯ ಮೀನು ಕೊಲ್ಲಿ ವಲಯದ ಉಪವಲಯಾಧಿಕಾರಿ ಕೂಡಕಂಡಿ ಸುಬ್ರಾಯ, ಗ್ರಾಮ ಲೆಕ್ಕಿಗ ಸಚಿನ್, ಪಂಚಾಯತ್ ರಾಜ್ ಇಂಜಿನಿಯರ್ ಫಯಾಜ್ ಅಹಮದ್, ಪಶುಪಾಲನಾ ಇಲಾಖೆಯ ಸುರೇಶ್ ಇದ್ದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮಾ, ಸದಸ್ಯರಾದ ಮಾವಾಜಿ ರಕ್ಷಿತ್, ಆರ್.ಕೆ. ಚಂದ್ರು, ಗಿರಿಜಮ್ಮ, ಜಾಜಿ ಇದ್ದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಎಸ್. ರಾಜಶೇಖರ್ ಸ್ವಾಗತಿಸಿದರು. ಸಿಬ್ಬಂದಿ ಪವಿತ್ರ ಹಿಂದಿನ ಗ್ರಾಮ ಸಭೆಯ ವರದಿ ಓದಿದರು. ಕಾರ್ಯದರ್ಶಿ ಶೇಷಗಿರಿ ವಂದಿಸಿದರು.