ಗೋಣಿಕೊಪ್ಪಲು, ಜು. ೨೫: ಎರಡು ದಿನಗಳ ಕಾಲ ಕೊಂಚ ಬಿಡುವು ನೀಡಿದ್ದ ವರುಣರಾಯ ಬುಧವಾರ ರಾತ್ರಿಯಿಂದ ಒಂದೇ ಸಮನೆ ಸುರಿದ ಪರಿಣಾಮ ದಕ್ಷಿಣ ಕೊಡಗಿನಲ್ಲಿ ಹಲವೆಡೆ ಮರಗಳು ರಸ್ತೆಗೆ ಉರುಳಿವೆ.

ವಿದ್ಯುತ್ ಕಂಬಗಳು ನೆಲಕಚ್ಚಿವೆ. ಕೇರಳ-ಕರ್ನಾಟಕ ಸಂಪರ್ಕ ರಸ್ತೆಯ ಕುಟ್ಟ ಚೆಕ್‌ಪೋಸ್ಟ್ ಬಳಿಯ ಪೂಜೆಕಲ್ಲು ರಸ್ತೆಯ ಒಂದು ಬದಿಯಲ್ಲಿ ಭಾರೀ ಕುಸಿತ ಕಂಡಿದ್ದು ಒಂದೇ ಮಾರ್ಗವಾಗಿ ವಾಹಗಳು ಸಂಚಾರ ಮಾಡುತ್ತಿವೆ.

ಕೆಲ ಗಂಟೆ ವಿರಾಮ ನೀಡುವ ಮಳೆ ನಂತರ ಮೋಡ ಮುಸುಕಿನ ವಾತಾವರಣದಲ್ಲಿ ಒಂದೇ ಸಮನೆ ಸುರಿಯುತ್ತಿದೆ.

ಬೆಸಗೂರು ಬಳಿ ಮುಖ್ಯ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ರಸ್ತೆ ಬದಿಯಲ್ಲಿದ್ದ ಹಲವು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮಳೆಯ ನಡುವೆ ಭತ್ತದ ಗದ್ದೆಗಳಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಗ್ರಾಮೀಣ ಪ್ರದೇಶಗಳಲ್ಲಿ ಜಡಿ ಮಳೆಯ ಹಿನ್ನೆಲೆಯಲ್ಲಿ ಜನರು ಹೊರ ಬರುವ ಪ್ರಯತ್ನ ಮಾಡಲೇ ಇಲ್ಲ.

ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿ ವರುಣ ಕೊಂಚ ಬಿಡುವು ನೀಡಿದ್ದರೂ ಆಗೊಮ್ಮೆ ಈಗೊಮ್ಮೆ ಮಳೆ ಕಾಣಿಸಿಕೊಳ್ಳುತ್ತಿದೆ. ಪೊನ್ನಂಪೇಟೆ ನಗರದಲ್ಲಿ ಬಿಡುವು ನೀಡದಂತೆ ಒಂದೇ ಸಮನೆ ಮಳೆಯು ಸುರಿಯುತ್ತಿದೆ.

- ಹೆಚ್.ಕೆ. ಜಗದೀಶ್