ನಾಪೋಕ್ಲು, ಜು. ೨೫: ಇಲ್ಲಿ ಆಟೋ ಚಾಲಕರು ವಾಹನ ಸಂಚಾರಕ್ಕೆ ದುಸ್ತರವಾದ ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚುವುದರ ಮೂಲಕ ಶ್ರಮದಾನ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಸಮೀಪದ ಹಳೆ ತಾಲೂಕಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಬಳಿ ರಸ್ತೆ ಹೊಂಡಗಳಾಗಿದ್ದು ವಾಹನ ಚಾಲಕರು ಸಮಸ್ಯೆ ಎದುರಿಸುವಂತಾಗಿದೆ. ಮಳೆ ನೀರು ರಸ್ತೆಯಲ್ಲಿ ಸರಾಗವಾಗಿ ಹರಿಯುತ್ತಿರುವುದರಿಂದಾಗಿ ರಸ್ತೆ ಯಾವುದು ಗುಂಡಿ ಯಾವುದು ಎಂದು ಗೋಚರಿಸದ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಾಲಾ ಬಸ್‌ಗಳು, ಇತರ ವಾಹನಗಳು ಒಂದೇ ಬದಿಯಲ್ಲಿ ಚಲಿಸುವಂತಾಗಿ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆ ಸರಿಪಡಿಸುವಂತೆ ಈ ಹಿಂದೆ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ಆದರೆ ಯಾವುದೇ ಸ್ಪಂದನ ದೊರಕದ ಕಾರಣ ನಾಪೋಕ್ಲುವಿನ ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಜಲ್ಲಿ ಕಲ್ಲುಗಳನ್ನು ತಂದು ರಸ್ತೆಹೊಂಡ ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಎಲ್ಲರ ಪ್ರಸಂಸೆಗೆ ಭಾಜನಾರಾದರು. ಈ ಸಂದರ್ಭ ಆಟೋ ಚಾಲಕ ಸಂಘದ ಮಾಜಿ ಅಧ್ಯಕ್ಷ ರಜಾಕ್, ಆಟೋ ಚಾಲಕರಾದ ಸತೀಶ್, ಚೇತನ್, ಕಿರಣ್, ವಿನು, ಬಿಪಿನ್, ವಿಜು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

-ದುಗ್ಗಳ