ಗುಂಡುಗಳ ಮೊರೆತ ಕೇಳಿ ಬಂದಿದ್ದ ಕಾರ್ಗಿಲ್‌ನಲ್ಲೀಗ ಪ್ರವಾಸಿಗರ ಹೆಜ್ಜೆ ಸಪ್ಪಳ..!

ನಮ್ಮ ಭವಿಷ್ಯದ ನಾಳೆಗಾಗಿ... ಅವರು ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದರು...! ಇಂತಹದ್ದೊAದು ಸಂದೇಶ ಕಾಣ ಸಿಗುವುದು ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ. ಇದು ಭಾರತೀಯ ಸೈನಿಕನ ನಿಜ ಜೀವನಕ್ಕೊಂದು ಅರ್ಥಪೂರ್ಣ ಸಂದೇಶ. ಸೈನಿಕನ ತ್ಯಾಗ, ಬಲಿದಾನಕ್ಕೆ ಪರಿಪೂರ್ಣವಾಗಿ ಹೊಂದುವ ಅಕ್ಷರ ನಮನ.

ಹೌದಲ್ಲ... ೨೫ ವರ್ಷಗಳ ಹಿಂದೆ ಕಾರ್ಗಿಲ್ ಎಂಬ ಸಮರಭೂಮಿಯಲ್ಲಿ ನಮ್ಮ ಭಾರತೀಯ ಸೈನಿಕರು ತಮ್ಮ ಸಂಸಾರ, ಸುಖವನ್ನೆಲ್ಲಾ ಬದಿಗಿಟ್ಟು ಮೈಕೊರೆಯುವ ಛಳಿ, ಗಾಳಿ ಲೆಕ್ಕಿಸದೆ ಕಾಲಿಟ್ಟರೆ ಕುಸಿಯುವಂತಹ ಮಂಜಿನ ಮೇಲೆ ನಡೆಯುತ್ತಾ ಪಾಕಿಗಳಿಂದ ಅತಿಕ್ರಮಿತವಾಗಿದ್ದ ಕಾರ್ಗಿಲ್‌ಅನ್ನು ಸಂರಕ್ಷಿಸದೇ ಹೋಗಿದ್ದರೆ... ನಮ್ಮ ಭವಿಷ್ಯಕ್ಕೆ ಈಗಿನಂತೆ ನೆಮ್ಮದಿ ಇರುತ್ತಿತ್ತೇ...?

ಅಂದು ಕಾರ್ಗಿಲ್ ಎಂಬ ಹಿಮಚ್ಚಾಧಿತ ಪ್ರದೇಶವನ್ನು ಮತ್ತೆ ಭರತ ಭೂಮಿಗೆ ಒಪ್ಪಿಸುವಲ್ಲಿ ನಮ್ಮ ಹೆಮ್ಮೆಯ ಸೈನಿಕರು ಅದೆಂತಹಾ ಕಠಿಣ ಪರಿಸ್ಥಿತಿ ಎದುರಿಸಿರಬಹುದು? ಅದುವರೆಗೂ ಕಂಡು ಕೇಳರಿಯದ ಯುದ್ಧವನ್ನು ಜಯಿಸಬೇಕಾದರೆ ನಮ್ಮ ಭಾರತೀಯ ಸೈನಿಕರು ಅದೆಷ್ಟು ರಕ್ತ ಬಸಿದಿರಬಹುದು? ಕೊಡಗಿನಲ್ಲಿ ಒಂದು ವಾರದ ಮಳೆ, ಗಾಳಿಗೇ ತತ್ತರಿಸಿ ಹೋಗುವ ನಾವುಗಳು ಹಿಮದಿಂದ ಕೂಡಿರುವ ಸೂರ್ಯನ ಕಿರಣವೇ ಪ್ರವೇಶಿಸಿರದ ಕಾರ್ಗಿಲ್ ಎಂಬ ಬೆಟ್ಟದಲ್ಲಿ ಶೀತಮಯ ವಿಷಮ ಪರಿಸ್ಥಿತಿಯಲ್ಲಿ ಅನ್ನ ಆಹಾರವೂ ಇಲ್ಲದ ದುಸ್ಥಿತಿಯಲ್ಲಿ ನಡೆದ ಹೋರಾಟದಲ್ಲಿ ಕೆಚ್ಚೆದೆಯಿಂದ ಕಾದಾಡಿದ ಪರಾಕ್ರಮಿಗಳ ತ್ಯಾಗ, ಬಲಿದಾನಕ್ಕೆ ಮೌಲ್ಯ ಕಟ್ಟಲಾದೀತೇ?

ಇಂಡೋ-ಚೀನಾ, ಇಂಡೋ-ಪಾಕ್, ಬಾಂಗ್ಲಾ ಹೋರಾಟಗಳೂ ಸೇರಿದಂತೆ ಭಾರತದ ಪ್ರಮುಖ ಯುದ್ಧಗಳಲ್ಲಿ ಈವರೆಗೂ ಅಗ್ರಗಣ್ಯವಾಗಿ ನಿಲ್ಲುವಂತಹದ್ದು ಕಾರ್ಗಿಲ್ ಕದನ.

ಯಾಕೆಂದರೆ ಇದು ಸೈನಿಕರು ಮಾತ್ರವಲ್ಲ, ಭಾರತೀಯರೆಲ್ಲರೂ ಕಣ್ಣಾರೆ ಕಂಡ, ಯುದ್ದ ಭೂಮಿಯ ರೋಚಕತೆ, ಸೈನಿಕರ ತ್ಯಾಗ, ಬಲಿದಾನ, ಶೌರ್ಯಗಳನ್ನೆಲ್ಲಾ ಕಿರುತೆರೆ ಮೂಲಕ, ಪತ್ರಿಕೆಗಳ ಫೋಟೋಗಳ ಮೂಲಕ ಕಂಡುಕೊAಡಿದ್ದ ಯುದ್ಧವಾಗಿತ್ತು. ಹೀಗಾಗಿಯೇ ಕಾರ್ಗಿಲ್ ಕದನಕ್ಕೆ ಇಂದಿಗೂ ಮಹತ್ವವಿದೆ. ಸೈನಿಕರ ಬಲಿದಾನವೂ ಪ್ರತಿ ಭಾರತೀಯರ ಗೌರವ ನಮನಕ್ಕೆ ಸಾಕ್ಷಿಯಾಗಿದೆ.

೧೯೯೯ ರಲ್ಲಿ ಅಂದರೆ ಇಂದಿಗೆ ೨೫ ವರ್ಷಗಳ ಹಿಂದೆ ವಿಶ್ವಮಟ್ಟದಲ್ಲಿ ಭಾರತದ ಗೌರವ ಕಾಪಾಡಿದ, ಸೈನಿಕರ ಜಯಭೇರಿಗೆ ಕಾರಣವಾಗಿದ್ದ ಕಾರ್ಗಿಲ್ ಸಮರ ಸಂಭವಿಸಿದ್ದು ಸೈನಿಕ ಸಮುದಾಯದ ಮನದಲ್ಲಿ ಹಚ್ಚಹಸಿರಾಗಿದೆ. ಯುದ್ಧ ಎಂದರೆ ಕಾರ್ಗಿಲ್ ಎಂದೇ ಭಾರತೀಯರು ನೆನಪಿಸಿಕೊಳ್ಳುವಂತಾಗಿದೆ.

ಇAತಹ ಸ್ಮರಣೀಯ ಗೆಲುವಿಗೆ ಕಾರಣವಾದ ಭಾರತೀಯ ಯೋಧರ ಹೆಮ್ಮೆಯ ಸಮರ ಭೂಮಿ ಕಾರ್ಗಿಲ್ ಈಗ ಪ್ರವಾಸಿಗರ ವೀಕ್ಷಣೆಗೂ ಮುಕ್ತವಾಗಿದೆ. ೨೫ ವರ್ಷಗಳ ಹಿಂದೆ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಕಾದಾಡಿದ ಭೂಮಿಯ ಮೇಲೆ ಈಗ ಪ್ರವಾಸಿದರೂ ಹೆಜ್ಜೆ ಹಾಕಿ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಈ ಮೂಲಕ ಇತರ ದೇಶಗಳಂತೆ ಭಾರತದಲ್ಲಿಯೂ ಯುದ್ಧ ಭೂಮಿಯೊಂದು ಪ್ರವಾಸಿ ಆಕರ್ಷಣೆ ಗಳಿಸುವಂತಾಗಿದೆ.

ಭಾರತ ಮತ್ತು ಪಾಕಿಸ್ತಾನ ಸೈನ್ಯದ ನಡುವೆ ಘನಘೋರ ಕಾಳಗ ನಡೆದ ಕಾರ್ಗಿಲ್ ಬಳಿಯ ಮುಶ್ಕೋ ಕಣಿವೆಯು ಇದೀಗ ಪ್ರವಾಸೀ ತಾಣವಾಗಿ ಪರಿವರ್ತನೆಯಾಗುವ ಹಂತದಲ್ಲಿದೆ, ದಟ್ಟ ಕಾಡು, ಪ್ರಪಾತಗಳಿಂದ ಕೂಡಿರುವ ಮುಶ್ಕೋ ಕಣಿವೆಯು ಮನಮೋಹಕ ನಿಸರ್ಗ ಸೌಂದರ್ಯವನ್ನು ತನ್ನಲ್ಲಿ ಹೊಂದಿದೆ.

ಅAತೆಯೇ ಕಸ್ಕಾರ್, ಚುಲಿಚಾನ್, ಗರ್ಗಾರ್ಡೋ ವ್ಯಾಪ್ತಿಯ ಕಣಿವೆಗಳನ್ನು ಕೂಡ ಪ್ರವಾಸೀ ತಾಣಗಳನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಸುಸ್ಥಿರ ಮತ್ತು ಪರಿಸರ ಸ್ನೇಹಿಯಾದ ಪ್ರವಾಸೋದ್ಯಮಕ್ಕೆ ಈ ಕಣಿವೆಗಳಲ್ಲಿ ಆದ್ಯತೆ ನೀಡಲು ಲಡಾಖ್ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ.

ದೇಶದ ಗಡಿಭಾಗದ ಭದ್ರತೆಯನ್ನು ಪ್ರಮುಖವಾಗಿ ಕೇಂದ್ರೀಕರಿಸಿಕೊAಡು ಇಲ್ಲಿನ ಪ್ರಾಕೃತ್ತಿಕ ಸೌಂದರ್ಯವನ್ನು ಪ್ರವಾಸಿಗರು ಆಸ್ವಾಧಿಸುವಂತಾಗಬೇಕು. ಇದರೊಂದಿಗೆ ಭಾರತೀಯ ಸೈನ್ಯದ ಶೌರ್ಯದ ಕಥೆ ಹೇಳುವ ಕಾರ್ಗಿಲ್ ಪ್ರಾಂತ್ಯದ ದರ್ಶನದ ಮೂಲಕ ದೇಶಭಕ್ತಿಯ ರೋಮಾಂಚನವನ್ನೂ ದೇಶ ವಿದೇಶದ ಪ್ರವಾಸಿಗರು ಅನುಭವಿಸುವಂತಾಗಬೇಕು. ಜತೆಗೆ ಇಲ್ಲಿನ ಪರ್ವತಗಳಲ್ಲಿ ಹೆಜ್ಜೆ ಹಾಕುವ ಸವಾಲಿನ ಅನುಭವ ಕೂಡ ಸಂದರ್ಶಕರಿಗೆ ದೊರಕಬೇಕು ಎಂಬುದೇ ಕಾರ್ಗಿಲ್ ಸಮರ ಭೂಮಿಯನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸುವುದರ ಮುಖ್ಯ ಉದ್ದೇಶವಾಗಿದೆ.

ಕಾರ್ಗಿಲ್ ಯುದ್ಧ ನಡೆದ ಬಳಿಕ ಈ ಪ್ರಾಂತ್ಯ ಭಾರತೀಯ ಸೈನ್ಯದ ಬಿಗಿ ಭದ್ರತೆಯಲ್ಲಿದೆ. ಲೆಹ್, ಲಡಾಖ್ ಮತ್ತು ಶ್ರೀನಗರದ ಮೂಲಕ ಕಾರ್ಗಿಲ್‌ಗೆ ತೆರಳುವವರು ಇಲ್ಲಿನ ಸೇನಾ ಭದ್ರತೆಯ ಸರ್ಪಗಾವಲಿನ ಕಣ್ಣೋಟದ ನಡುವೇ ಸಾಗುವಂತಾಗಿದೆ. ಇದೀಗ ಸೈನಿಕರ ಹದ್ದಿನಗಣ್ಣಿನ ನಡುವೇ ಕೆಲವೊಂದು ನಿಯಮಗೊಳಪಟ್ಟು ಕಾರ್ಗಿಲ್‌ನಲ್ಲಿ ಯುದ್ಧ ನಡೆದ ಕೆಲವು ಆಯಕಟ್ಟಿನ ಸ್ಥಳಗಳನ್ನು ಕಾರ್ಗಿಲ್ ಸಮರಕ್ಕೆ ೨೫ ವರ್ಷಗಳ ಬಳಿಕ ಪ್ರವಾಸಿಗರ ನೋಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಮೊದಲ ಹೆಜ್ಜೆಯಾಗಿ ಹಂಬ್ಟೋAಗ್ ಲಾ ಎಂಬಲ್ಲಿ ಪ್ರವಾಸಿಗರಿಗಾಗಿ ಸೆಲ್ಫಿ ಪಾಯಿಂಟ್‌ನ್ನು ರೂಪಿಸಲಾಗಿದೆ. ಉದ್ಘಾಟನೆಯಾದ ೩ ತಿಂಗಳಿನಲ್ಲಿಯೇ ಲಕ್ಷಾಂತರ ಪ್ರವಾಸಿಗರು ಸೆಲ್ಫಿ ಪಾಯಿಂಟ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಕಾರ್ಗಿಲ್‌ನ ಪರ್ವತಶ್ರೇಣಿಗಳು ಈ ಪಾಯಿಂಟ್ ಹಿನ್ನೆಲೆಯಲ್ಲಿ ಕಾಣುವುದೇ ಇದರ ವಿಶೇಷ.

ಕಾರ್ಗಿಲ್‌ನಂತಹ ಸಮರ ಭೂಮಿಯನ್ನು ಪ್ರವಾಸಿಗರಿಗೆ ಮತ್ತಷ್ಟು ಹೆಚ್ಚಿನ ತಾಣಗಳ ಮೂಲಕ ತೆರೆಯುವುದರೊಂದಿಗೆ ಕಾರ್ಗಿಲ್ ಜತೆಜತೆಗೇ ಭಾರತೀಯ ವೀರ ಯೋಧರ ಕಾರ್ಗಿಲ್ ಗೆಲುವಿನ ಇತಿಹಾಸ ಕೂಡ ಜನರಲ್ಲಿ ಸ್ಮರಣೀಯವಾಗುತ್ತದೆ. ಕಾರ್ಗಿಲ್ ಎಂಬುದು ಸಮರಕ್ಕೆ ಹೆಸರಾದಂತೆ ಪ್ರಾಕೃತಿಕ ಸೌಂದರ್ಯಕ್ಕೂ ಸಂದರ್ಶಕರಲ್ಲಿ ಜನಜನಿತವಾಗುತ್ತದೆ ಎಂಬ ಉದ್ದೇಶ ಕೂಡ ಯೋಜನೆಯ ಜಾರಿಯ ಹಿಂದಿದೆ.

ಪ್ರತಿವರ್ಷ ಲೇಹ್ ಮತ್ತು ಕಾರ್ಗಿಲ್‌ಗೆ ಅಂದಾಜು ೫,೫೦ ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇದೀಗ ಮತ್ತಷ್ಟು ರೋಮಾಂಚನಕಾರಿ ತಾಣಗಳ ಸೇರ್ಪಡೆಯೊಂದಿಗೆ ಈ ಸಂಖ್ಯೆ ಸಾಕಷ್ಟು ಹೆಚ್ಚಾಗಬಹುದು ಎಂಬ ಲೆಕ್ಕಾಚಾರವಿದೆ. ಕಾರ್ಗಿಲ್ ಶ್ರೇಣಿಯ ದ್ರಾಸ್‌ನಲ್ಲಿ ಈಗಾಗಲೇ ಇರುವ ಕಾರ್ಗಿಲ್ ಹುತಾತ್ಮ ಸೈನಿಕರ ಯುದ್ಧ ಸ್ಮಾರಕವು ಸಂದರ್ಶಕರಿಗೆ ಭಾವನಾತ್ಮಕ ಅನುಭವ ನೀಡುವಂತಿದೆ. ಭಾರತಕ್ಕಾಗಿ ಪ್ರಾಣತೆತ್ತ ೫೨೭ ವೀರ ಸೈನಿಕರ ನೆನಪಿನಲ್ಲಿ ಇಲ್ಲಿ ಶಿಲಾಸ್ಮಾರಕಗಳನ್ನು ನಿರ್ಮಿಸಲಾಗಿದೆ. ಎಂತಹವರು ಕೂಡ ಕಾರ್ಗಿಲ್ ಯೋಧರ ತ್ಯಾಗ ಬಲಿದಾನ ನೆನದು ಇಲ್ಲಿ ಕಣ್ಣೀರಾಗುತ್ತಾರೆ. ಅಂತೆಯೇ ಕಾರ್ಗಿಲ್ ಸಮರದ ಮಾಹಿತಿ ನೀಡುವ ಫಲಕಗಳು, ದ್ವಾರಗಳು, ಪಟಪಟನೆ ಹಾರಾಡುತ್ತಾ ಭಾರತೀಯ ಸೇನೆಯ ಹಿರಿಮೆ ಸಾರುವ ತ್ರಿವರ್ಣ ಧ್ವಜ, ಸೇನಾ ಧ್ವಜಗಳು ಕೂಡ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವವರ ಪಾಲಿಗೆ ಆಕರ್ಷಣೆ ಜತೆಗೇ ಮನಮುಟ್ಟುವ ಸ್ಥಳಗಳಾಗಿದೆ.

ವಿದೇಶಗಳಲ್ಲಿ ಯುದ್ಧ ಭೂಮಿಯನ್ನು ಈಗಾಗಲೇ ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸಿ ಯುದ್ಧದ ರೋಚಕ ಕಥೆಗಳನ್ನು ಹೇಳುತ್ತಾ ಸಂದರ್ಶಕರನ್ನು ಸೆಳೆಯಲಾಗುತ್ತಿದೆ. ಅಂತೆಯೇ ೨೫ ವರ್ಷಗಳ ಹಿಂದಿನ ಯುದ್ಧ ತಾಣ ಕಾರ್ಗಿಲ್ ಕೂಡ ಇದೀಗ ಭಾರತೀಯ ಸೈನಿಕರ ವೀರ ಪರಾಕ್ರಮದ ಕಥೆ ಹೇಳಲು ಸಜ್ಜಾಗುತ್ತಿದೆ.

ಪಾಕಿಗಳ ವಿರುದ್ಧ ಕೇಕೆ ಹಾಕಿ ತಕ್ಕ ಪಾಠ ಕಲಿಸಿದ್ದ ಭಾರತೀಯ ಸೈನಿಕರ ಅಪ್ರತಿಮ ಶೌರ್ಯದ ಭೂಮಿಯಲ್ಲಿ ಇನ್ನು ಮುಂದೆ ಪ್ರವಾಸಿದಂಡಿನ ಸಂಭ್ರಮದ ಕೇಕೆಯ ಸದ್ದು ಕೇಳಿಬರಲಿದೆ. ಅಂತೆಯೇ, ಹುತಾತ್ಮ ಯೋಧರನ್ನು ಸ್ಮರಿಸುತ್ತಾ ಸಂದರ್ಶಕರು ಹರಿಸುವ ಕಣ್ಣೀರ ಹನಿಗಳೂ ಕಾರ್ಗಿಲ್ ತಾಣದಲ್ಲಿ ಹೆಚ್ಚಲಿದೆ. ಕಾರ್ಗಿಲ್ ರಣಭೂಮಿಯ ಹಿನ್ನೆಲೆಯಲ್ಲಿನ ಹಿಮ ಶಿಖರಗಳಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸಿಗರಿಂದ ಕೇಳಿಬರಲಿರುವ ಘೋಷವಾಕ್ಯವೆಂದರೆ...

ಜೈ ಹಿಂದ್...! ವಂದೇ ಮಾತರಂ...!

- ಅನಿಲ್ ಎಚ್.ಟಿ., ಮಡಿಕೇರಿ