(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜು. ೨೫ : ಲೈನ್ ಮನೆಯಲ್ಲಿ ವಾಸವಾಗಿದ್ದುಕೊಂಡು ತೋಟದ ಕೆಲಸದಲ್ಲಿ ತೊಡಗಿಸಿಕೊಂಡು ಜೀವನ ಕಟ್ಟುಕೊಂಡಿದ್ದ ಜ್ಯೋತಿ (೬೨) ವನ್ಯಪ್ರಾಣಿ ದಾಳಿಯಿಂದ ಸಿಲುಕಿ ಜೀವ ಕಳೆದುಕೊಂಡಿರಬಹುದೇ.? ಎಂಬ ಶಂಕೆ ಇದೀಗ ವ್ಯಕ್ತವಾಗಿದೆ.

ತಿತಿಮತಿ ಗ್ರಾಮ ಪಂಚಾಯಿತಿಯ ನೊಕ್ಯ ಭದ್ರಗೊಳ ಗ್ರಾಮದ ಕಾರ್ಯಪ್ಪ ಎಂಬವರ ಕಾಫಿ ತೋಟದಲ್ಲಿ ಹಲವು ವರ್ಷಗಳಿಂದ ಜ್ಯೋತಿ ಕೂಲಿ ಕೆಲಸ ಮಾಡಿಕೊಂಡು ಜೀವನ ಕಟ್ಟುಕೊಂಡಿದ್ದು. ಸಮೀಪದ ಇನ್ನೊಂದು ಲೈನ್ ಮನೆಯಲ್ಲಿ ಈಕೆಯ ಮಗಳು ಪ್ರೇಮ ಹಾಗೂ ಅಳಿಯ ಗಣೇಶ್ ಕೂಡ ಕೂಲಿ ಕೆಲಸ ಮಾಡಿಕೊಂಡಿದ್ದರು. ತೋಟದ ಮಾಲೀಕರು ಬೆಂಗಳೂರಿನಲ್ಲಿ ವಾಸವಾಗಿದ್ದು, ತೋಟದ ನಿರ್ವಹಣೆಯ ಬಹುತೇಕ ಜವಾಬ್ದಾರಿಯೂ ಜ್ಯೋತಿ ನೋಡಿಕೊಳ್ಳುತ್ತಿದ್ದರು.

ಪ್ರತಿನಿತ್ಯ ಕಾಫಿ ತೋಟದ ನಡುವೆ ನಡೆದುಕೊಂಡೆ ಮತ್ತೊಂದು ಲೈನ್ ಮನೆಯಲ್ಲಿ ವಾಸವಿದ್ದ ತನ್ನ ಮಗಳಾದ ಪ್ರೇಮ ಮನೆಗೆ ಹೋಗುವುದು ಬರುವುದು ಮಾಡುತ್ತಿದ್ದರು. ಆದರೆ ಜೂನ್ ೨೪ರಂದು ಪ್ರೇಮಾಳ ಮನೆಗೆ ಬರುವುದನ್ನು ನಿಲ್ಲಿಸಿಬಿಟ್ಟಿದ್ದರು. ತಾಯಿ ಬಾರದೆ ಇರುವುದನ್ನು ಮನಗಂಡ ಮಗಳು ಮುಂಜಾನೆಯ ವೇಳೆ, ತಾಯಿ ವಾಸ (ಮೊದಲ ಪುಟದಿಂದ) ಮಾಡುವ ಲೈನ್ ಮನೆಗೆ ತೆರಳಿ ನೋಡಿದಾಗ ಅಲ್ಲಿ ತಾಯಿ ಇರಲಿಲ್ಲ. ಇದನ್ನು ಗಮನಿಸಿ ಹಲವು ಕಡೆಗಳಲ್ಲಿ, ಬಂಧು ಬಳಗದವರಲ್ಲಿ ವಿಚಾರಿಸಿದರೂ ತಾಯಿಯ ಸುಳಿವು ಮಾತ್ರ ಸಿಗಲೇ ಇಲ್ಲ.

ದಿನ ಕಳೆಯುತ್ತಿದ್ದಂತೆಯೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮಗಳು ಪ್ರೇಮ ಹಾಗೂ ಅಳಿಯ ಗಣೇಶ ತಾ. ೧೧ರಂದು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ತಾಯಿ ಜ್ಯೋತಿ ತಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಗೋಣಿಕೊಪ್ಪ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದರು.

ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮಾರ್ಗದರ್ಶನ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುದೋಳ್, ನಿರ್ದೇಶನದ ಮೇರೆ ಗೋಣಿಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್ಫೆಕ್ಟರ್ ರೂಪಾದೇವಿ ಬೀರಾದಾರ್, ತಮ್ಮ ಸಹ ಸಿಬ್ಬಂದಿ ಸಹಕಾರದೊಂದಿಗೆ ತನಿಖೆ ಕೈಗೊಂಡು ಹುಡುಕಾಟ ನಡೆಸುತ್ತಿದ್ದರು. ತಾ. ೨೪ರಂದು ಮೃತಪಟ್ಟ ಜ್ಯೋತಿ ಧರಿಸಿದ ಸೀರೆ ಹಾಗೂ ತಲೆ ಬುರುಡೆ, ಮೂಳೆಗಳು ಕಾರ್ಮಿಕರ ಕಣ್ಣಿಗೆ ಬಿದ್ದಿವೆ. ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿದು ಘಟನಾಸ್ಥಳಕ್ಕೆ ತೆರಳಿ ಪರಿಶೀಲಿಸಿ ಸೀರೆ, ಬಟ್ಟೆ, ತಲೆ ಬುರುಡೆ ಹಾಗೂ ಮೂಳೆಗಳನ್ನು ವಶಪಡಿಸಿಕೊಂಡು ಮಹಜರು ನಡೆಸಿದ್ದಾರೆ. ಅಲ್ಲದೆ ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಎಫ್‌ಎಸ್‌ಎಲ್ ವರದಿಗೆ ಕಳುಹಿಸಿದ್ದಾರೆ.

ಜೂನ್ ೨೪ರಂದು ಕಾಣೆಯಾಗಿದ್ದ ಜ್ಯೋತಿ ಕಾಫಿ ತೋಟದಲ್ಲಿ ಮೃತಪಟ್ಟು ಅನೇಕ ದಿನಗಳೇ ಕಳೆದಿವೆ. .ಜುಲೈ ೨೪ರಂದು ತೋಟದ ಕಾರ್ಮಿಕರು ತೋಟದಲ್ಲಿ ಗೊಬ್ಬರ ಹಾಕುವ ವೇಳೆ ಹಾಗೂ ಕಾಡನ್ನು ಕಡಿಯುತ್ತಿದ್ದ ವೇಳೆ ಸೀರೆಯೊಂದು ಕಂಡು ಬಂದಿದೆ. ಪಕ್ಕದಲ್ಲಿಯೇ ತಲೆ ಬುರುಡೆ, ಕೆಲವು ಮೂಳೆಗಳು ಗೋಚರಿಸಿವೆ. ಈ ಮಾಹಿತಿಯನ್ನು ಕಾರ್ಮಿಕರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಜ್ಯೋತಿಯ ಮಗಳಾದ ಪ್ರೇಮ ಅವರನ್ನು ಸ್ಥಳಕ್ಕೆ ಕರೆದೊಯ್ದ ವಿಚಾರಿಸಿದ ಸಂದರ್ಭ ಇದು ತನ್ನ ತಾಯಿಯ ಸೀರೆಯೆಂದು ಖಚಿತಪಡಿಸಿದ್ದಾಳೆ.

ವನ್ಯ ಪ್ರಾಣಿ ದಾಳಿ ಶಂಕೆ

ಮೃತಪಟ್ಟ ಮಹಿಳೆ ಜ್ಯೋತಿ ತೋಟದ ಮಧ್ಯೆಯೇ ತನ್ನ ಮಗಳ ಮನೆಗೆ ಹೋಗಿ ಬರುವುದು ಮಾಡುತ್ತಿದ್ದರು. ಈ ಭಾಗದಲ್ಲಿ ವನ್ಯಪ್ರಾಣಿ ಓಡಾಟ ಇದ್ದು, ಜೂನ್ ೨೪ರಂದು ಸಂಜೆ ೬ ಗಂಟೆಯ ನಂತರ ಜ್ಯೋತಿ ತನ್ನ ಮಗಳ ಮನೆಯಿಂದ ಹೋದವಳು ಮತ್ತೆ ಕಾಣೆಯಾಗಿದ್ದಳು. ರಾತ್ರಿಯ ವೇಳೆ ಕಾಫಿ ತೋಟದಲ್ಲಿ ನಡೆದುಕೊಂಡು ತೆರಳುತ್ತಿದ್ದ ವೇಳೆ ವನ್ಯ ಪ್ರಾಣಿಯು ದಾಳಿ ನಡೆಸಿ ಜ್ಯೋತಿಯನ್ನು ಕೊಂದಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸುರಿದ ಭಾರಿ ಮಳೆಯಿಂದ ದುರ್ನಾಥವೂ ಬಂದಿರಲಿಲ್ಲ. ಜ್ಯೋತಿಯ ಮೃತದೇಹ ಕೊಳೆತು ತಲೆ ಬುರುಡೆ, ಮೂಳೆಗಳು ಮಾತ್ರ ದೊರೆತ್ತಿದೆ. ಅಲ್ಲದೆ ಈ ಭಾಗದಲ್ಲಿ ಹಲವು ದಿನಗಳ ಹಿಂದೆ ಹುಲಿಯ ಹೆಜ್ಜೆ ಗುರುತುಗಳನ್ನು ಕಾರ್ಮಿಕರು ಗಮನಿಸಿದ್ದರು.

ಪ್ರಕರಣ ದಾಖಲು

ಕಾಣೆಯಾಗಿದ್ದ ಮಹಿಳೆ ಜ್ಯೋತಿ ಮೇಲ್ನೋಟಕ್ಕೆ ವನ್ಯ ಪ್ರಾಣಿಯ ದಾಳಿಗೆ ಸಿಲುಕಿ ಸಾವನಪ್ಪಿರುವ ಶಂಕೆ ಇದ್ದರೂ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಕೈಗೊಂಡಿದ್ದಾರೆ. ವೈದ್ಯರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಎದುರು ನೋಡುತ್ತಿದ್ದಾರೆ. ಅಲ್ಲದೆ ಜ್ಯೋತಿಯೊಂದಿಗೆ ಸಂಪರ್ಕದಲ್ಲಿದ್ದ ಹಲವರನ್ನು ಪೊಲೀಸರು ವಿಚಾರಣೆಗೂ ಒಳಪಡಿಸುತ್ತಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಯುತ್ತಿದೆ.