ಕಣಿವೆ, ಜು. ೨೫: ಬುಧವಾರ ಸಂಜೆ ಕುಶಾಲನಗರದಲ್ಲಿ ಕಾವೇರಿ ನದಿಗೆ ಹಾರಿದ ಮಡಿಕೇರಿ ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಅರುಣ್ ಕುಮಾರ್ ಪತ್ತೆಗೆ ವಿವಿಧ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಕೊಡಗು ಎಸ್ಪಿ ರಾಮರಾಜನ್ ಹೇಳಿದರು.

ಕಣಿವೆಯ ರಾಮಲಿಂಗೇಶ್ವರ ದೇವಾಲಯದ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಬಳಿ ನದಿಯ ನೀರಿನ ಹರಿವನ್ನು ಪರಿಶೀಲಿಸಿದ ಅವರು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಮಡಿಕೇರಿಯ ಎಸಿ ಕಚೇರಿಯ ಸಿಬ್ಬಂದಿ ಅರುಣ್ ಕುಮಾರ್ ಹುಡುಕಾಟಕ್ಕೆ ಗುರುವಾರ ವಿಶೇಷ ತಂಡಗಳನ್ನು ರಚಿಸಲಾಗಿದೆ. ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ೧೪ ಮಂದಿ ಪೊಲೀಸರ ತಂಡ, ಎನ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ತಂಡಗಳು ಸೇರಿ ೫ ತಂಡಗಳನ್ನು ರಚಿಸಲಾಗಿದೆ. ಈ ಎಲ್ಲ ತಂಡಗಳು ಕುಶಾಲನಗರದಿಂದ ನದಿಯುದ್ದಕ್ಕೂ ತೆರಳಿ ಅರುಣ್‌ಕುಮಾರ್ ಅವರ ಶವ ಪತ್ತೆಗೆ ಪ್ರಯತ್ನಿಸುತ್ತಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬಹಳಷ್ಟು ಜಾಗೃತೆ ವಹಿಸಿ ರ‍್ಯಾಫ್ಟ್ಗಳಲ್ಲಿ ಕಾರ್ಯಾಚರಿಸಲು ನಿರ್ದೇಶನ ನೀಡಲಾಗಿದೆ. ಅದರಂತೆಯೇ ಐದು ತಂಡಗಳ ಮಂದಿ ಕಾರ್ಯಾಚರಿಸುತ್ತಿರುವ ಬಗ್ಗೆ ಅವರು ತಿಳಿಸಿದರು. ಈ ಸಂದರ್ಭ ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಇದ್ದರು.