ಸೋಮವಾರಪೇಟೆ, ಜು. ೨೫: ಸೋಮವಾರಪೇಟೆ ಕಸಬಾ ಹೋಬಳಿ ಸೇರಿದಂತೆ ತಾಲೂಕಿನಾದ್ಯಂತ ಮಳೆ ಮುಂದುವರೆದಿದ್ದು, ಭಾರೀ ಗಾಳಿಗೆ ಜನಜೀವನ ತತ್ತರಿಸಿದೆ. ಅಲ್ಲಲ್ಲಿ ಮರಗಳು ಉರುಳುತ್ತಿದ್ದು, ಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಗುಡ್ಡ ಕುಸಿತ, ಮನೆಗಳ ಮೇಲೆ ಮರ ಬಿದ್ದು ನಷ್ಟ ಸಂಭವಿಸುತ್ತಿವೆ.

ಇAದು ಬೆಳಿಗ್ಗೆ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಜೇಡಿಗುಂಡಿಯಲ್ಲಿ ಗುಡ್ಡ ಕುಸಿತವಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ತಪ್ಪಿದೆ. ಬೆಳಿಗ್ಗೆ ೮ ಗಂಟೆಗೆ ಪಟ್ಟಣದಿಂದ ಶಾಂತಳ್ಳಿ ಮಾರ್ಗದ ಬಸವನಕಟ್ಟೆ, ನಗರಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಆಗಮಿಸಿ ಹಾಸನಕ್ಕೆ ತೆರಳುವ ಬಸ್ ಅಪಾಯದಿಂದ ಪಾರಾಗಿದೆ.

ಸರ್ಕಾರಿ ಬಸ್ ತೆರಳುತ್ತಿದ್ದ ಸಂದರ್ಭವೇ ಗುಡ್ಡ ಕುಸಿತಗೊಂಡಿದ್ದು, ಅಪಾಯದ ಮುನ್ಸೂಚನೆ ಅರಿತ ಚಾಲಕ, ಬಸ್ ಅನ್ನು ತಕ್ಷಣ ನಿಲ್ಲಿಸಿ, ಹಿಂಬದಿಗೆ ಚಾಲಿಸಿದ್ದಾರೆ. ಕೆಲ ಕ್ಷಣಗಳಲ್ಲಿಯೇ ಮಣ್ಣಿನ ಗುಡ್ಡ ರಸ್ತೆಗೆ ಜರುಗಿದೆ. ಒಂದು ವೇಳೆ ಬಸ್‌ಗೆ ಬರೆ ಅಪ್ಪಳಿಸಿದ್ದರೆ ಎಡಭಾಗದ ಗುಂಡಿಗೆ ಬಸ್ ಬೀಳುವ ಸಾಧ್ಯತೆಗಳಿತ್ತು. ಇದರೊಂದಿಗೆ ಪ್ರಯಾಣಿಕರಿಗೂ ಅಪಾಯ ಎದುರಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗುಡ್ಡ ಕುಸಿತದಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಡೆ ಬಿದ್ದಿದ್ದು, ಕೆಲ ಸಮಯದ ನಂತರ ಯಂತ್ರದ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು. ಮಣ್ಣನ್ನು ತೆರವು ಮಾಡುತ್ತಿದ್ದಂತೆ ಮತ್ತೆ ಗುಡ್ಡ ಕುಸಿಯುತ್ತಿದ್ದು, ಆತಂಕ ಮುಂದುವರೆದಿದೆ.

ಇನ್ನು ಎಲ್ಲೆಡೆ ಭಾರೀ ಗಾಳಿ ಬೀಸುತ್ತಿದ್ದು, ವಾಸದ ಮನೆಗಳಿಗೆ ಹಾನಿಯಾಗುತ್ತಿವೆ. ತೀವ್ರ ಗಾಳಿಯಿಂದಾಗಿ ಜನರು ಮನೆಯಿಂದ ಹೊರಬರಲೂ ಹಿಂದೇಟು ಹಾಕುವಂತಾಗಿದೆ. ಮಳೆಯ ಭೋರ್ಗರೆತದ ನಡುವೆ ಬೀಸುತ್ತಿರುವ ಗಾಳಿ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.

ಮಕ್ಕಳು, ವೃದ್ಧರು ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ಕೊಡೆಗಳನ್ನು ಹಿಡಿದು ನಡೆದಾಡಲೂ ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಶನಿವಾರಸಂತೆ ಸಮೀಪದ ದೊಡ್ಡಬಿಳಹ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಮರಬಿದ್ದು, ಸಂಚಾರ ಸ್ಥಗಿತಗೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಮರವನ್ನು ತೆರವು ಗೊಳಿಸಿದ್ದಾರೆ.

(ಮೊದಲ ಪುಟದಿಂದ) ಭಾರೀ ಗಾಳಿ ಹಿನ್ನೆಲೆ ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯ ಕಲ್ಕಂದೂರು ಗ್ರಾಮದ ಪ್ರವೀಣ್ ಎಂಬವರ ವಾಸದ ಮನೆಯ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದೆ.

ಕೂತಿ ಗ್ರಾಮ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹೊಳೆ, ತೊರೆಗಳು ತುಂಬಿ ಹರಿಯುತ್ತಿವೆ. ಕೂತಿ ಗ್ರಾಮದ ಹೊಳೆ ಅಪಾಯದ ಮಟ್ಟದಲ್ಲಿದ್ದು, ಗದ್ದೆ-ತೋಟಗಳಿಗೆ ತೆರಳುವ ರಸ್ತೆಯಲ್ಲಿ ನಿರ್ಮಿಸಿರುವ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.

ಸೋಮವಾರಪೇಟೆ-ಸಕಲೇಶಪುರ ಮಾರ್ಗದ ಕುಂದಳ್ಳಿಯಲ್ಲಿ ರಸ್ತೆಗೆ ಮರ ಬಿದ್ದಿದ್ದು, ಕೆಲಕಾಲ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ತೋಳೂರುಶೆಟ್ಟಳ್ಳಿ ಗ್ರಾಮದ ನವೀನ್ ಅವರ ಮನೆ ಅತೀ ಶೀತಕ್ಕೆ ಸಂಪೂರ್ಣ ಕುಸಿದಿದೆ. ಮನೆಯ ಗೋಡೆಗಳು ಹಾಗೂ ಛಾವಣಿ ಧರಾಶಾಹಿಯಾಗಿದ್ದು, ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ರುದ್ರಪ್ಪ ಸೇರಿದಂತೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೂತಿ ಗ್ರಾಮದ ಮುಖ್ಯರಸ್ತೆಯ ಮೇಲೆ ಮರ ಬಿದ್ದ ಹಿನ್ನೆಲೆ ಬಸ್ ಸೇರಿದಂತೆ ಇತರ ವಾಹನಗಳ ಸಂಚಾರಕ್ಕೆ ತಡೆಯಾಗಿತ್ತು. ಮರ ಬಿದ್ದಿದ್ದರಿಂದ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಮಧು, ಸಂಜಯ್ ಅವರುಗಳಿಗೆ ಸೇರಿದ ಅಡಿಕೆ, ಶುಂಠಿ ಕೃಷಿ ಸಂಪೂರ್ಣ ನೀರಿನಲ್ಲಿ ಮುಚ್ಚಿ ಹೋಗಿವೆ. ಶುಂಠಿ ಗದ್ದೆಯಲ್ಲಿ ನೀರು ನಿಂತಿದ್ದು, ಬೆಳೆ ನಷ್ಟ ಸಂಭವಿಸಿದೆ.

ಬಿಳಿಗೇರಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಮರ ಬಿದ್ದು, ವಿದ್ಯುತ್ ಟ್ರಾನ್ಸ್ಫಾರ್ಮರ್ ಸಹಿತ ಕಂಬ ಕೆಳಗೆ ಬಿದ್ದಿದ್ದು, ಈವರೆಗೆ ತೆರವು ಕಾರ್ಯ ಮಾಡಿಲ್ಲ. ಕೂತಿ ಗ್ರಾಮದ ಹೆಚ್.ಎ. ಲೀಲಾವತಿ ಅವರಿಗೆ ಸೇರಿದ ವಾಸದ ಮನೆಯ ಹಿಂಭಾಗವಿದ್ದ ಕೊಟ್ಟಿಗೆ ಭಾರೀ ಗಾಳಿಗೆ ಹಾನಿಯಾಗಿದೆ. ಕೊಟ್ಟಿಗೆಯ ಛಾವಣಿ ಶೀಟ್‌ಗಳು ಮುರಿದಿದ್ದು, ಇದರ ಒಳಭಾಗ ನಿಲ್ಲಿಸಿದ್ದ ಕಾರು ಜಖಂಗೊAಡಿದೆ. ಕಂಬಳ್ಳಿ ಗ್ರಾಮದ ಕೆ.ಟಿ. ಬೆಳ್ಳಿಯಪ್ಪ ಅವರ ವಾಸದ ಮನೆಯ ಹಿಂಭಾಗ ಬರೆ ಕುಸಿದು, ಮನೆ-ತೋಟಕ್ಕೆ ಹಾನಿಯಾಗಿದೆ.

ಕತ್ತಲಲ್ಲಿ ಗ್ರಾಮಗಳು: ಮಳೆಯೊಂದಿಗೆ ಗಾಳಿಯ ಅರ್ಭಟ ಹೆಚ್ಚಿರುವ ಹಿನ್ನೆಲೆ ನೂರಾರು ಮರಗಳು ಧರಾಶಾಹಿಯಾಗುತ್ತಿವೆ. ವಿದ್ಯುತ್ ತಂತಿಗಳ ಮೇಲೆ ಮರಗಳು ಬೀಳುತ್ತಿರುವುದರಿಂದ ಕಂಬಗಳು ನೆಲಕ್ಕಚ್ಚುತ್ತಿವೆ. ಪರಿಣಾಮ ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಭಾಗಗಳು ಕಳೆದ ೧೫ ದಿನಗಳಿಂದ ಕತ್ತಲಲ್ಲಿ ಮುಳುಗಿವೆ.

ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಮರೀಚಿಕೆಯಾಗಿದೆ. ಕಳೆದ ೧೫ ದಿನಗಳಿಂದ ವಿದ್ಯುತ್ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಮೊಬೈಲ್ ಚಾರ್ಜ್ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಈ ಭಾಗದ ಹಲವಷ್ಟು ಮಂದಿಯ ಮೊಬೈಲ್ ಕಳೆದ ೧೫ ದಿನಗಳಿಂದ ಸ್ವಿಚ್ ಆಫ್ ಆಗಿದೆ. ಕೆಲವರು ತಮ್ಮ ವಾಹನಗಳನ್ನು ಸ್ಟಾರ್ಟ್ ಮಾಡಿಕೊಂಡು ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ.

ಶಾಂತಳ್ಳಿ ಹೋಬಳಿಗೆ ಒಳಪಡುವ ನಾಡ್ನಳ್ಳಿ, ಮಲ್ಲಳ್ಳಿ, ಬೀದಳ್ಳಿ, ಕುಂದಳ್ಳಿ, ಕುಡಿಗಾಣ, ಕೊತ್ನಳ್ಳಿ, ಬೀಕಳ್ಳಿ, ತಡ್ಡಿಕೊಪ್ಪ, ಹರಗ ಸೇರಿದಂತೆ ಇನ್ನಿತರ ಉಪ ಗ್ರಾಮಗಳಿಗೆ ವಿದ್ಯುತ್ ಸ್ಥಗಿತಗೊಂಡಿದೆ. ಇದರೊಂದಿಗೆ ಗರ್ವಾಲೆ, ಸೂರ್ಲಬ್ಬಿ, ಮುಟ್ಲು ವ್ಯಾಪ್ತಿಯಲ್ಲೂ ಕತ್ತಲೆಯ ಕಾರ್ಮೋಡ ಕವಿದಿದೆ.

ಸೆಸ್ಕ್ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದರೂ ಪರಿಸ್ಥಿತಿಯನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಲೈನ್‌ಮೆನ್‌ಗಳ ಸಂಖ್ಯೆಯೂ ಕಡಿಮೆ ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಕಾರ್ಯಗಳು ಆಗುತ್ತಿಲ್ಲ. ಒಂದು ಲೈನ್ ದುರಸ್ತಿ ಮಾಡಿಕೊಂಡು ಮುಂದೆ ಸಾಗಿದರೆ ಹಿಂದಿನಿAದ ಮತ್ತೆ ಮರಗಳು ಬೀಳುತ್ತಿವೆ. ಲೈನ್‌ಮೆನ್‌ಗಳ ಶ್ರಮ ವ್ಯರ್ಥವಾಗುತ್ತಿದೆ. ‘ಬೆಳಿಗ್ಗೆ ೭ ಗಂಟೆಯಿAದ ರಾತ್ರಿಯವರೆಗೂ ಕೆಲಸ ಮಾಡುತ್ತಿದ್ದೇವೆ. ಆದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಮಳೆಯಿದ್ದರೂ ಪರವಾಗಿಲ್ಲ; ಗಾಳಿಯ ರಭಸದಿಂದಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ’ ಎಂದು ಲೈನ್‌ಮೆನ್ ಓರ್ವರು ತಿಳಿಸಿದ್ದಾರೆ.

ಕಳೆದ ೨೪ ಗಂಟೆಗಳಲ್ಲಿ ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೧೦೫.೦೪ ಮಿ.ಮೀ., ಶಾಂತಳ್ಳಿಗೆ ೨೧೮, ಕುಶಾಲನಗರಕ್ಕೆ ೫.೬, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೆ ೧೧೦.೮, ಶನಿವಾರಸಂತೆಗೆ ೮೬ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

- ವಿಜಯ್ ಹಾನಗಲ್