ಸೋಮವಾರಪೇಟೆ, ಜು. ೨೫: ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಒಂದು ನಿಮಿಷ ಬಿಡುವು ನೀಡಿದರೆ ಮರು ನಿಮಿಷದಿಂದ ಅದರ ಎರಡು ಪಟ್ಟು ಮಳೆ ಸುರಿಯುತ್ತಿದೆ. ಮಳೆಯೊಂದಿಗೆ ಗಾಳಿಯ ಹೊಡೆತ ತಡೆದುಕೊಳ್ಳುವುದು ಕಷ್ಟ ಎಂಬAತಾಗಿದೆ. ಮರಗಳು ಬಿದ್ದು ಹಾನಿ ಸಂಭವಿಸುತ್ತಿದೆ. ರಸ್ತೆ ಸಂಚಾರ ಬಂದ್ ಆಗುತ್ತಿದೆ. ರಾತ್ರಿ ವೇಳೆ ಹೆಚ್ಚು ಮಳೆಯಾಗುತ್ತಿದ್ದು, ವಿದ್ಯುತ್ ಸ್ಥಗಿತದಿಂದಾಗಿ ಎಲ್ಲಿ ಏನಾಗಿದೆ? ಎಂಬ ಮಾಹಿತಿಯೂ ಇಲ್ಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೆಳಿಗ್ಗೆ ೮ ಗಂಟೆಗೆ ಮಳೆ ರಜೆ ಘೋಷಣೆ ಮಾಡುವುದು ಸರಿಯೇ? ಎಂದು ವಿದ್ಯಾರ್ಥಿಗಳ ಪೋಷಕರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಕಾರಣ.., ನಿನ್ನೆ ಹಾಗೂ ತಾ. ೨೫ರಂದು ಬೆಳಿಗ್ಗೆ ೮ ಗಂಟೆಯ ವೇಳೆಗೆ ಅಧಿಕಾರಿಗಳು, ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಿರುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ತಹಶೀಲ್ದಾರ್ ಅವರುಗಳು ಇಂದು ಬೆಳಿಗ್ಗೆ ರಜೆ ಘೋಷಣೆ ಮಾಡಿದ್ದರಿಂದ ಗೊಂದಲ ಉಂಟಾಗಿ ಶಾಲಾ ಮಕ್ಕಳು ರಸ್ತೆ ಬದಿ, ಬಸ್ ನಿಲ್ದಾಣ, ಶಾಲಾ ಆವರಣ, ಪಟ್ಟಣದ ಅಂಗಡಿ ಮುಂಗಟ್ಟುಗಳಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸೋಮವಾರಪೇಟೆ ಪಟ್ಟಣದಲ್ಲಿರುವ ಶಾಲಾ ಕಾಲೇಜುಗಳಿಗೆ ಗ್ರಾಮೀಣ ಪ್ರದೇಶದಿಂದಲೇ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಬಸ್ ಸೇರಿದಂತೆ ಇನ್ನಿತರ ಸೌಲಭ್ಯಗಳ ಕೊರತೆಯಿಂದ ಬೆಳಿಗ್ಗೆ ೬ ರಿಂದ ೭ ಗಂಟೆಯ ವೇಳೆಗಾಗಲೇ ವಿದ್ಯಾರ್ಥಿಗಳು ಮನೆಯಿಂದ ಹೊರಟಿರುತ್ತಾರೆ. ಮಕ್ಕಳು ಹೊರಟ ನಂತರ ಪೋಷಕರು ತಮ್ಮ ಕೆಲಸ ಕಾರ್ಯಗಳಿಗೆ ತೆರಳಿರುತ್ತಾರೆ. ಮನೆಗೆ ಬೀಗ ಹಾಕಿಕೊಂಡು ಹೋಗುವ ಪೋಷಕರು ಸಂಜೆ ವೇಳೆಗೆ ವಾಪಸ್ಸಾಗುತ್ತಾರೆ.

ಮನೆಯಿಂದ ಶಾಲೆಗೆ ಹೊರಟ ನಂತರ ಅಧಿಕಾರಿಗಳು ರಜೆ ಘೋಷಣೆ ಮಾಡಿದರೆ ಮಕ್ಕಳು ಎಲ್ಲೆಲ್ಲೋ ಕಾಲ ಕಳೆಯುವಂತಾಗುತ್ತದೆ. ಇದರೊಂದಿಗೆ ವಿದ್ಯುತ್ ಸ್ಥಗಿತದಿಂದಾಗಿ ಮೊಬೈಲ್‌ಗಳೂ ಸ್ವಿಚ್ ಆಫ್ ಆಗಿವೆ. ಶಾಲೆಗೆ ರಜೆ ಇರುವ ಬಗ್ಗೆ ಮಾಹಿತಿಯೂ ತಲುಪಿರುವುದಿಲ್ಲ. ಇಂದೂ ಸಹ ಹಲವಷ್ಟು ಮಕ್ಕಳು ಪಟ್ಟಣಕ್ಕೆ ಬಂದಿದ್ದರು. ಕೆಲವರು ಶಾಲೆಗಳಿಗೆ ತೆರಳಿದ್ದರು. ಭೋರ್ಗರೆಯುವ ಮಳೆ, ತೀವ್ರ ಸ್ವರೂಪದಲ್ಲಿ ಬೀಸುತ್ತಿರುವ ಗಾಳಿಯ ನಡುವೆಯೂ ಶಾಲೆಗಳಿಗೆ ಹೋಗಿದ್ದ ಮಕ್ಕಳು, ನಂತರ ಪಟ್ಟಣಕ್ಕೆ ವಾಪಸ್ ಆದರು. ಆದರೆ ಮನೆ ಕಡೆಗೆ ವಾಪಸ್ ತೆರಳಲು ಬಸ್, ಇತರ ವಾಹನಗಳಿಲ್ಲದೆ ಪಟ್ಟಣದಲ್ಲೇ ಕಾಲ ಕಳೆದರು.

ಗರ್ವಾಲೆ, ಸೂರ್ಲಬ್ಬಿ ಭಾಗದಿಂದ ಬೆಳಿಗ್ಗೆ ೮ ಗಂಟೆಯ ವೇಳೆಗೆ ಮಾದಾಪುರಕ್ಕೆ ಆಗಮಿಸಿದ್ದ ಮಕ್ಕಳಿಗೆ ರಜೆಯ ವಿಚಾರ ತಿಳಿದ್ದದ್ದೇ ೮.೩೦ಕ್ಕೆ. ಅತ್ತ ವಾಪಸ್ ಮನೆಗೆ ಹೋಗಲು ಬಸ್ ಇಲ್ಲದೇ ಮಧ್ಯಾಹ್ನ ೧೨.೩೦ರವರೆಗೆ ಕೊರೆಯುವ ಚಳಿಯಲ್ಲಿ ಅಂಗಡಿಗಳ ಮುಂದೆ ನಿಂತುಕೊAಡಿದ್ದರು. ಇನ್ನು ಗ್ರಾಮೀಣ ಭಾಗದಿಂದ ಬೆಳಿಗ್ಗೆ ಪಟ್ಟಣಕ್ಕೆ ಬಂದ ವಿದ್ಯಾರ್ಥಿಗಳ ವ್ಯಥೆಯೂ ಇದೇ ಆಗಿತ್ತು.

ಮಳೆಯ ತೀವ್ರತೆ ಅರಿತು ಮುಂಚಿತವಾಗಿ ರಜೆ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ ಪರಿಣಾಮ ಇಷ್ಟೆಲ್ಲಾ ಗೊಂದಲಗಳು ನಿರ್ಮಾಣವಾದವು. ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿಯೇ ನೆಲೆಸಬೇಕೆಂಬ ಆದೇಶವಿದ್ದರೂ ಸಹ ಹಲವಷ್ಟು ಅಧಿಕಾರಿಗಳು ಇದನ್ನು ಪಾಲಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿದ್ದರೆ ವಾಸ್ತವಿಕತೆಯ ಅರಿವು ಆಗುತ್ತಿತ್ತು. ಮಳೆಯ ತೀವ್ರತೆ, ಗಾಳಿಯ ರಭಸ ನೋಡಿಕೊಂಡು ರಜೆ ನೀಡಬೇಕೇ? ಬೇಡವೇ? ಎಂದು ಹಿಂದಿನ ದಿನವೇ ನಿರ್ಧರಿಸಬಹುದಿತ್ತು. ಆದರೆ ಇಲ್ಲಿ ಹಾಗಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಒಟ್ಟಾರೆ ಅಧಿಕಾರಿಗಳ ಇಂತಹ ನಿರ್ಧಾರದಿಂದ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೀಡಾಗುತ್ತಿದ್ದಾರೆ ಎಂಬುAದತೂ ಸತ್ಯ.

‘ಈ ಅಧಿಕಾರಿಗಳು ಕೊಡಗಿನಲ್ಲಿದ್ದಾರೆಯೇ ಅಥವಾ ಅಥವಾ ಅವರುಗಳ ಊರಿನಲ್ಲಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ. ಶಾಲೆ ಪ್ರಾರಂಭವಾಗಲು ಇನ್ನು ಅರ್ಧ ಗಂಟೆ ಇದೆ ಎನ್ನುವಾಗ ರಜೆ ಘೋಷಿಸುತ್ತಾರೆ. ಎಂತಹ ಅವ್ಯವಸ್ಥೆ ಇದು. ಮಕ್ಕಳು ದೂರದ ಊರುಗಳಿಂದ ಶಾಲಾ ಗೇಟ್ ಬಳಿ ಬಂದಾಗ ರಜೆ ನೀಡಿದ್ದಾರೆ’ ಎಂದು ಅಬ್ಬೂರುಕಟ್ಟೆಯ ವಿನಯ್ ಸಂಭ್ರಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಿಸುವಾಗ ಹಿಂದಿನ ದಿನ ರಾತ್ರಿ ಅಥವಾ ಮರುದಿನ ೭ ಗಂಟೆಯ ಒಳಗೆ ರಜೆ ಘೋಷಿಸಿ. ತಡವಾಗಿ ಘೋಷಿಸುವುದರಿಂದ ಹಲವಷ್ಟು ಮಕ್ಕಳನ್ನು ಶಾಲಾ ವಾಹನಗಳು ಕರೆದೊಯ್ದಿರುತ್ತವೆ. ಕೆಲವರು ರಸ್ತೆಯಲ್ಲಿ ಕಾಯುತ್ತಿರುತ್ತಾರೆ. ಹವಾಮಾನ ಇಲಾಖೆಯ ವರದಿ ಹಾಗೂ ವಾಸ್ತವಿಕತೆಯನ್ನು ಗಮನದಲ್ಲಿರಿಸಿ ರಜೆ ಘೋಷಿಸಿ’ ಎಂದು ಕರ್ಕಳ್ಳಿಯ ಸುನಿಲ್ ಅವರು ಸಲಹೆ ನೀಡಿದ್ದಾರೆ.

‘ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಇವರುಗಳ ಕಾರ್ಯ ಕೇವಲ ಪಟ್ಟಣಕ್ಕಲ್ಲ ಎಂಬುದನ್ನು ಮನಗಾಣಬೇಕು. ಸೋಮವಾರಪೇಟೆ ಹೆಚ್ಚಾಗಿ ಗ್ರಾಮಾಂತರ ಪ್ರದೇಶವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಬೆಳಿಗ್ಗೆ ೬ ಗಂಟೆಯಿAದ ೬.೩೦ಕ್ಕೆ ಹೊರಟು ಬಂದಿರುತ್ತಾರೆ. ಅಂತಹ ಮಕ್ಕಳಿಗೆ ರಜೆ ಇರುವುದು ತಿಳಿಯುವುದೇ ಶಾಲೆಗೆ ಬಂದಾಗ. ಇದೆಲ್ಲಾ ನಮ್ಮ ದಪ್ಪ ಚರ್ಮದ ಅಧಿಕಾರಿಗಳಿಗೆ ತಿಳಿಯೋದು ಯಾವಾಗ?’ ಎಂದು ಜಯಕರ್ನಾಟಕ ಸಂಘಟನೆಯ ರಫೀಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಮಳೆಯ ಬಗ್ಗೆ ಎಲ್ಲೆಡೆಯಿಂದ ಮಾಹಿತಿ ಸಂಗ್ರಹಿಸಿ, ಕಷ್ಟನಷ್ಟಗಳ ಬಗ್ಗೆ ಅಂದಾಜಿಸಿದರೆ ಗೊಂದಲಕ್ಕೆ ಅವಕಾಶ ಇರುವುದಿಲ್ಲ. ಈ ಬಗ್ಗೆ ಇನ್ನು ಮುಂದಾದರೂ ಅಧಿಕಾರಿಗಳು ಗಮನ ಹರಿಸಲಿ’ ಎಂದು ಮಾದಾಪುರದ ಭವಿನ್, ಮಜೀದ್ ಅಭಿಪ್ರಾಯಿಸಿದ್ದಾರೆ.