ವೀರಾಜಪೇಟೆ, ಜು. ೨೫: ವೀರಾಜಪೇಟೆ ವಿಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ಈ ವಿಭಾಗದ ಗದ್ದೆಗಳು ಜಲಾವೃತ್ತಗೊಂಡಿವೆ.

ಬುಧವಾರ ರಾತ್ರಿಯಿಂದಲೇ ಸುರಿದ ಮಳೆ ಗುರುವಾರ ಮಧ್ಯಾಹ್ನ ದವರೆಗೂ ಮುಂದುವರಿಯಿತು. ಬಳಿಕ ಕೊಂಚ ಬಿಡುವು ನೀಡಿದ್ದ ಮಳೆ ಸಂಜೆ ವೇಳೆ ಬಿರುಸಿನಿಂದ ಸುರಿಯಿತು.

ಮಳೆ ಬಿಡುವು ನೀಡುವ ಸಂದರ್ಭ ಚಳಿ ಮಿಶ್ರೀತ ವಿಪರೀತ ಗಾಳಿ ಬೀಸುತ್ತಿದ್ದು ಜನರಿಗೆ ಭಯ ಹುಟ್ಟಿಸುತ್ತಿದೆ. ಇದರಿಂದ ತೋಟಗಳಲ್ಲಿ ಮರದ ಕೊಂಬೆಗಳು ಮುರಿದು ಬೀಳುವ ಆತಂಕ ರೈತರಿಗೆ ಎದುರಾಗಿದೆ. ಗ್ರಾಮೀಣ ಭಾಗದ ತೋಟಗಳಲ್ಲಿ ಮರದ ಕೊಂಬೆ ರೆಂಬೆಗಳು ಮುರಿದು ಬಿದ್ದು ಫಸಲು ನಾಶಗೊಂಡಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಕೆದಮುಳ್ಳೂರು, ತೋರ, ಪಾಲಂಗಾಲ ಸೇರಿದಂತೆ ಇತರೆಡೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ.

ವೀರಾಜಪೇಟೆ ವಿಭಾಗದ ಬಿಟ್ಟಂಗಾಲ, ನಾಲ್ಕೇರಿ, ಕದನೂರು, ಕಾಕೋಟುಪರಂಬು, ಕಂಡAಗಾಲ, ಚೆಂಬೆಬೆಳ್ಳೂರು, ಪಾಲಂಗಾಲ, ದೇವಣಗೇರಿ, ಹಾಲುಗುಂದ, ಒಂಟಿಯAಗಡಿ, ಕಣ್ಣಂಗಾಲ, ಬಿಳುಗುಂದ, ಅಮ್ಮತ್ತಿ, ಹೊಸೂರು, ಹೊಸಕೋಟೆ, ಕೊಮ್ಮೆತೋಡು, ಮಗ್ಗುಲ, ಐಮಂಗಲ, ಬಾಡಗ, ರುದ್ರಗುಪ್ಪೆ, ಕರಡ, ಕಡಂಗ, ಬೇತ್ರಿ, ಕಿಗ್ಗಾಲು, ಆರ್ಜಿ, ಬೇಟೋಳಿ, ಹೆಗ್ಗಳ, ಕೆದಮುಳ್ಳೂರು ಅರಮೇರಿ, ಗುಂಡಿಗೆರೆ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರೆದಿದೆ.

ವೀರಾಜಪೇಟೆ ವಿಭಾಗಕ್ಕೆ ಸುರಿದ ಮಳೆಯ ಪರಿಣಾಮವಾಗಿ ಅರಮೇರಿ ಗ್ರಾಮದ ಎಚ್.ಡಿ. ಶಾಂತಿ ಅವರ ವಾಸದ ಮನೆ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ.

ಸ್ಥಳಕ್ಕೆ ವಿರಾಜಪೇಟೆ ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಂಡAಗೇರಿ, ಬೋಯಿಕೇರಿ, ಬೇತ್ರಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು ಗ್ರಾಮೀಣ ಭಾಗಗಳಲ್ಲಿ ತಗ್ಗು ಪ್ರದೇಶಗಳ ಗದ್ದೆಗಳು ಸಂಪೂರ್ಣ ನೀರಿನಿಂದ ಆವೃತವಾಗಿವೆ.

ವೀರಾಜಪೇಟೆ ವಿಭಾಗಕ್ಕೆ ಬುಧವಾರ ಬೆಳಗಿನಿಂದ ಗುರುವಾರ ಬೆಳಗಿನ ೮ ಗಂಟೆಯ ತನಕ ಒಟ್ಟು ೪೪.೬೦ ಮಿ.ಮೀ ಮಳೆ ಸುರಿದಿದೆ.