ವೀರಾಜಪೇಟೆ, ಜು. ೨೫ : ಮಳೆ ನೀರು ಸಮರ್ಪಕವಾಗಿ ಹರಿಯಲು ಅನುವು ಮಾಡಿಕೊಡುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯಲ್ಲಿ ಯಾರೆಲ್ಲ ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್ ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಮಳೆ ನೀರು ಸಮರ್ಪಕವಾಗಿ ಹರಿಯದೇ ಮುಖ್ಯ ರಸ್ತೆಗೆ

(ಮೊದಲ ಪುಟದಿಂದ) ಹರಿದು ಬಂದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿತ್ತು. ಇದನ್ನು ಗಮನಿಸಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಬೋಸರಾಜು ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಸ್ಥಳಕ್ಕೆ ಆಗಮಿಸಿ ಮಳೆ ನೀರಿನಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೆಲವು ದಿನಗಳ ಹಿಂದೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಾರ್ವಜನಿಕ ಜಾಗದಲ್ಲಿ ಹಾಗೂ ರಾಜ ಕಾಲುವೆ ಒತ್ತುವರಿಯಾದ ಬಗ್ಗೆ ಪುರಸಭೆ ಸದಸ್ಯರು ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಸಚಿವರ ಹಾಗೂ ಶಾಸಕರ ಗಮನಕ್ಕೆ ತಂದಿದ್ದರು.

ಇದೇ ವೇಳೆ ಉಸ್ತುವಾರಿ ಸಚಿವರು ಯಾರೆಲ್ಲ ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಅವರಿಗೆಲ್ಲ ತಕ್ಷಣ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದರು.

ಅದರಂತೆ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಹಾಗೂ ಕಛೇರಿಯ ಸಿಬ್ಬಂದಿಗಳು ಒತ್ತುವರಿಯಾದ ಭಾಗಕ್ಕೆ ತೆರಳಿ ಏಳು ದಿನಗಳ ಒಳಗೆ ಒತ್ತುವರಿ ಮಾಡಿಕೊಂಡ ಜಾಗವನ್ನು ಬಿಟ್ಟು ಕೊಡುವಂತೆ ನೋಟಿಸ್ ನೀಡಿದ್ದಾರೆ.

ಮುಂದಿನ ಏಳು ದಿನಗಳ ಒಳಗೆ ರಾಜಕಾಲುವೆಯ ಜಾಗವನ್ನು ಬಿಟ್ಟು ಕೊಡದ ಪಕ್ಷದಲ್ಲಿ ಪುರಸಭೆ ವತಿಯಿಂದ ತೆರವುಗೊಳಿಸುವ ಕಾರ್ಯ ನಡೆಯಲಿದೆ. ಅಲ್ಲದೆ ಮಳೆ ನೀರು ಸರಾಗವಾಗಿ ಹರಿಯಲು ಶಾಶ್ವತ ಯೋಜನೆ ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಚಂದ್ರಕುಮಾರ್ ಮಾಹಿತಿ ನೀಡಿದರು.ವೀರಾಜಪೇಟೆಯಲ್ಲಿ ರಾಜ ಕಾಲುವೆ

ಒತ್ತುವರಿದಾರರಿಗೆ ನೋಟಿಸ್