ವೀರಾಜಪೇಟೆ, ಜು. ೨೫: ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ವೀರಾಜಪೇಟೆಯ ಶ್ರೀ ಕಾವೇರಿ ಆಶ್ರಮದ ಪುನಶ್ಚೇತನದ ಬಗ್ಗೆ ಪರವಿರೋಧ ಹೇಳಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪನವರು ಭಕ್ತಜನ ಸಂಘಕ್ಕೆ ಸಂಭಾವಿತ ಪದಾಧಿಕಾರಿಗಳ ಆಯ್ಕೆ ಕುರಿತು ಸಲಹೆಯನ್ನು ನೀಡಿದ್ದು ಈ ಬಗ್ಗೆ ಆಶ್ರಮದ ನೊಂದ ಭಕ್ತರ ಪರವಾಗಿ ಅಮ್ಮುಣಿಚಂಡ ರವಿ ಉತ್ತಪ್ಪ, ಮುಕ್ಕಾಟಿರ ಕ್ಯಾಟಿ ಉತ್ತಪ್ಪ, ಮಾದಂಡ ಎಸ್.ಪೂವಯ್ಯ ಹಾಗೂ ಚಂಬAಡ ಎಸ್. ಕಾವೇರಪ್ಪನವರು ಪತ್ರಿಕಾ ಹೇಳಿಕೆ ನೀಡುವುದರ ಮೂಲಕ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಅವರುಗಳು ತಮ್ಮ ಹೇಳಿಕೆಯಲ್ಲಿ ಕಾವೇರಿ ಆಶ್ರಮದ ಪುನಶ್ಚೇತನದ ಕುರಿತು ಈ ರೀತಿಯ ಅಪ್ರಬುದ್ಧ ಹೇಳಿಕೆ ನೀಡಲು ಅಖಿಲ ಕೊಡವ ಸಮಾಜ ಅಧ್ಯಕ್ಷರ ಅಧಿಕಾರವನ್ನು ಪ್ರಶ್ನಿಸುತ್ತಿದ್ದೇವೆ ಎಂದಿದ್ದಾರೆ. ಕೆಲವು ದಿನಗಳ ಹಿಂದೆ ನಡೆಯಬೇಕಿದ್ದ ದೀಕ್ಷಾ ಕಾರ್ಯಕ್ರಮವನ್ನು ತಡೆಯುವ ಉದ್ದೇಶಕ್ಕಾಗಿ ಚರ್ಚಿಸಲು ಕರೆದಿದ್ದ ವಿಶೇಷ ಸಭೆಗೆ ಗೌರವಯುತ ಹೊಣೆಗಾರರಾಗಿರುವ ಸುಬ್ರಮಣಿ ಕಾವೇರಪ್ಪನವರು ಪ್ರಜ್ಞಾಪೂರ್ವಕವಾಗಿ ಗೈರು ಹಾಜರಾದ ಬಗ್ಗೆ ಪ್ರಶ್ನಿಸಿದರು. ಮಾತ್ರವಲ್ಲ ಕೆಲವೊಂದು ಕೊಡವ ಸಮಾಜಗಳ ಅಧ್ಯಕ್ಷರುಗಳಿಗೆ ತಪ್ಪು ಮಾಹಿತಿ ನೀಡಿ ಸಭೆಗೆ ಹಾಜರಾಗದಂತೆ ನೋಡಿಕೊಂಡಿದ್ದಾರೆ. ಇದು ಆಕ್ಷೇಪಾರ್ಹ ನಡವಳಿಕೆಯಾಗಿದೆ ಎಂದಿದ್ದಾರೆ. ಆಶ್ರಮದ ಬಗ್ಗೆ ಉತ್ತಮ ಚಿಂತನೆ ಹೊಂದಿರುವ ಹಿತೈಷಿಗಳು, ಈ ಹಿಂದೆ ಆಶ್ರಮದ ಉತ್ತಮ ಆಡಳಿತದಲ್ಲಿ ತೊಡಗಿಸಿಕೊಂಡಿದ್ದ ಹಿರಿಯರ ಹಾಗೂ ಹಾಲಿ ಆಡಳಿತ ಮಂಡಳಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಏಕಾಏಕಿ ನಿಯಮಬಾಹಿರ ಮತ್ತು ಏಕಪಕ್ಷೀಯವಾಗಿ ಸಂಭವನೀಯರು ಎಂದು ಸ್ವಯಂ ಹೇಳಿಕೊಂಡು ಪದಾಧಿಕಾರಿಗಳ ಹೆಸರನ್ನು ಪ್ರಕಟಿಸುವುದರ ಮೂಲಕ ಜನಾಂಗಕ್ಕೆ ತಪ್ಪು ಸಂದೇಶವನ್ನು ನೀಡಿದ್ದಾರೆ. ಇದು ಕಾರ್ಯ ಸಾಧುವೂ ಅಲ್ಲ ಎಂದಿದ್ದಾರೆ.