ಕೂಡಿಗೆ, ಜು. ೨೫: ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣವು ಹೆಚ್ಚಾದಂತೆ ಒಳ ನೀರಿನ ಹರಿಯುವಿಕೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ನೀರಿನ ಸಂಗ್ರಹ ಮಟ್ಟದ ಅಧಾರದ ಮೇಲೆ ನದಿಗೆ ೧೨ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಈಗಾಗಲೇ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾದರೆ ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ನೀರಾವರಿ ಇಲಾಖೆಯ ಹಾರಂಗಿ ವಿಭಾಗದ ವೃತ್ತ ಅಧೀಕ್ಷಕ ಅಭಿಯಂತರರ ಸೂಚನೆಯಂತೆ ಒಳಹರಿವಿನ ಮಟ್ಟದ ಆಧಾರದ ಮೇಲೆ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.