ಸೋಮವಾರಪೇಟೆ, ಜು. ೨೫: ಕಳೆದ ೨೦ ದಿನಗಳಿಂದ ತಾಲೂಕಿನ ತಾಕೇರಿ, ಕಿರಗಂದೂರು, ತಲ್ತರೆ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದು, ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಈ ಭಾಗದ ಗ್ರಾಮಸ್ಥರು, ಇಲ್ಲಿನ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಗಾಳಿ ಮಳೆಗೆ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿದೆ. ಇದನ್ನು ತೆರವುಗೊಳಿಸುವಲ್ಲಿ ವಿಳಂಬ ಮಾಡಲಾಗಿದೆ. ಮಳೆಗಾಲಕ್ಕೂ ಮುನ್ನ ಮರಗಳ ಕೊಂಬೆಗಳನ್ನು ಕಟಾವು ಮಾಡದೇ ಇರುವುದರಿಂದ ಇದೀಗ ಸಮಸ್ಯೆಯಾಗುತ್ತಿದೆ. ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ಮುಂದಿನ ದಿನಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತಾತ್ಕಾಲಿಕವಾಗಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿಕೊಳ್ಳ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿ ದರು. ಈ ಸಂಬAಧಿತ ಮನವಿಯನ್ನು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ ಅವರಿಗೆ ಸಲ್ಲಿಸಲಾಯಿತು. ಕಿರಗಂದೂರು ಗ್ರಾಮದಲ್ಲಿ ಈಗಾಗಲೇ ೨೦ ಕಂಬ ಮುರಿದುಬಿದ್ದಿದೆ. ತಾಕೇರಿಯಲ್ಲಿ ೪ ಕಂಬಗಳು ಹಾನಿಯಾಗಿದ್ದು, ೪೦ ಮನೆಗಳಿಗೆ ಸಮಸ್ಯೆಯಾಗಿದೆ. ಮುಂದಿನ ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈಗಾಗಲೆ ಬಾರ್ಲಗದ್ದೆ ಬಳಿ ಕಂಬಗಳನ್ನು ಅಳವಡಿಸಲಾಗುತ್ತಿದೆ ಎಂದು ಎಇಇ ತಿಳಿಸಿದರು. ಈ ಸಂದರ್ಭ ಪ್ರಮುಖರಾದ ಬಗ್ಗನ ಅನಿಲ್, ತಾಕೇರಿಯ ಎಸ್.ಪಿ.ಪೊನ್ನಪ್ಪ, ನಿತಿನ್, ಕಿರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾರಾ ಸುಧೀರ್, ಸದಸ್ಯ ರಘು, ಕಿರಗಂದೂರು ಗ್ರಾಮ ಸಮಿತಿ ಅಧ್ಯಕ್ಷ ಚಿದಾನಂದ, ತಾಕೇರಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.