ಕೊಡ್ಲಿಪೇಟೆ, ಜು. ೨೭: ಇಲ್ಲಿನ ಹೇಮಾವತಿ ರೋಟರಿ ಕ್ಲಬ್ನ ಅಧ್ಯಕ್ಷರಾಗಿ ಮಾಧವ್ ಲಾಲ್ ಮತ್ತು ಕಾರ್ಯದರ್ಶಿಯಾಗಿ ಕೆ.ಆರ್. ಸಾಗರ್ ಅವರುಗಳು ಅಯ್ಕೆಯಾಗಿದ್ದು, ಇತ್ತೀಚೆಗೆ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.
ಅಧ್ಯಕ್ಷರು, ಕಾರ್ಯದರ್ಶಿ ಗಳೊಂದಿಗೆ ನೂತನ ಸಾಲಿನ ಸಮಿತಿ ಪದಾಧಿಕಾರಿಗಳಿಗೆ ರೋಟರಿ ಜಿಲ್ಲಾ ಪಲ್ಸ್ ಪೋಲಿಯೋ ಮುಖ್ಯಸ್ಥ ಡಾ. ಸಿ.ಆರ್. ಪ್ರಶಾಂತ್ ಅವರು ಪ್ರತಿಜ್ಞಾವಿಧಿ ಬೋಧಿಸಿ ಪದಗ್ರಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಉಪ ರಾಜ್ಯಪಾಲ ಡಾ. ಹರಿ ಎ. ಶೆಟ್ಟಿ ಮಾತನಾಡಿ, ರೋಟರಿ ಹೇಮಾವತಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ನಡೆಸಿದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೋಟರಿ ವಲಯ ಸೇನಾನಿ ಕೆ.ಪಿ. ಜಯಕುಮಾರ್ ಮಾತನಾಡಿ, ಹೇಮಾವತಿ ರೋಟರಿ ಸಂಸ್ಥೆಯು ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯ ಗಡಿ ಭಾಗವಾಗಿರುವ ಕೊಡ್ಲಿಪೇಟೆಯಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು. ನಿರ್ಗಮಿತ ಅಧ್ಯಕ್ಷ ಎನ್.ಎ. ಅಮೃತ್ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಭಾನುಪ್ರಕಾಶ್ ವರದಿ ವಾಚಿಸಿದರು.
ವೇದಿಕೆಯಲ್ಲಿ ರೋಟರಿ ಪ್ರಮುಖರಾದ ಡಾ. ಉದಯ್ ಕುಮಾರ್, ಮಾಜಿ ಅಧ್ಯಕ್ಷ ಹೆಚ್.ಎಂ. ದಿವಾಕರ್, ಹೆಚ್.ಜೆ. ಪ್ರವೀಣ್, ಬಿ.ಕೆ. ಯತೀಶ್, ಡಿ.ವಿ. ದಿನೇಶ್, ಯು.ಹೆಚ್. ಉಮೇಶ್ ಸೇರಿದಂತೆ ಇತರರು ಇದ್ದರು.