ಮಡಿಕೇರಿ, ಜು. ೨೭: ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ೫೨೭ ಯೋಧರ ಸ್ಮರಣೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ೫೨೭ ಹಣತೆಗಳನ್ನು ಬೆಳಗಿಸುವ ಮೂಲಕ ವಿನೂತನವಾಗಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು.
ನಗರದ ಗಾಂಧಿ ಭವನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಸೇರಿದಂತೆ ರೋಟರಿ ಸದಸ್ಯರು ೫೨೭ ಹಣತೆಗಳನ್ನು ಬೆಳಗಿಸಿದರು. ಕಾರ್ಗಿಲ್ ಸಮರದಲ್ಲಿ ಭಾರತದ ಹೆಮ್ಮೆಯ ೫೨೭ ಯೋಧರು ೨೫ ವರ್ಷಗಳ ಹಿಂದೆ ಪ್ರಾಣತ್ಯಾಗ ಮಾಡಿದ್ದರು, ಈ ಯೋಧರ ತ್ಯಾಗ ಬಲಿದಾನದ ಸ್ಮರಣೆಯಲ್ಲಿ ೫೨೭ ಹಣತೆಗಳನ್ನು ಬೆಳಗಿಸಿ ಅವರನ್ನು ಸ್ಮರಿಸುವ ಪ್ರಯತ್ನ ಇದಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಹೇಳಿದರು.
ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಮದ್ರಾಸ್ ರೆಜಿಮೆಂಟ್‌ನಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಅನೇಕ ಸೇವಾ ಮೆಡಲ್‌ಗಳನ್ನು ಪಡೆದು ಸೇನೆಯಿಂದ ನಿವೃತ್ತರಾದ ಮಡಿಕೇರಿಯ ಸೇನಾಧಿಕಾರಿ ಬಿ.ಕೆ. ಲೋಕೇಶ್ ಮತ್ತು ಪತ್ನಿ ಕಲ್ಪನ ಲೋಕೇಶ್ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಗೌರವಿಸಲಾಯಿತು.
ಸನ್ಮಾನಿತರಾದ ಲೋಕೇಶ್ ಮಾತನಾಡಿ, ನಿವೃತ್ತಿ ನಂತರವೂ ಸಮಾಜದಲ್ಲಿ ಗೌರವವನ್ನು ಸದಾ ಕಾಲ ಪಡೆಯುವ ಸ್ಥಾನ ಎಂದರೆ ಅದು ಯೋಧನದ್ದಾಗಿದೆ ಎಂದರು. ಮುಂದಿನ ಜನ್ಮಗಳಲ್ಲಿಯೂ ತನ್ನನ್ನು ಸೈನಿಕನನ್ನಾಗಿ ಮಾಡು ಎಂದು ದೇವರಲ್ಲಿ ಕೋರುವುದಾಗಿ ಹೇಳಿದ ಲೋಕೇಶ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ದೇಶಸೇವೆಯ ಸ್ಮರಣೆಯಲ್ಲಿ ತನ್ನ ಮಕ್ಕಳಿಗೂ ಕಾರ್ಯಪ್ಪ, ತಿಮ್ಮಯ್ಯ ಎಂದೇ ಹೆಸರಿಟ್ಟಿರುವುದಾಗಿ ಹೇಳಿದರು.
ಯೋಧರನ್ನು ಗೌರವಿಸಿ
ಕಾರ್ಗಿಲ್ ಕದನದಲ್ಲಿ ವೀರಮರಣವನ್ನಪ್ಪಿದ ಮನೋಜ್ ಕುಮಾರ್ ಭಾಟಿಯಾ ಬಗ್ಗೆ ಮನ ಸೆಳೆಯುವಂತೆ ಮಾತನಾಡಿದ ಸುಂಟಿಕೊಪ್ಪದ ೯ನೇ ತರಗತಿ ವಿದ್ಯಾರ್ಥಿನಿ ಶ್ರೀಷ, ಭಾರತೀಯ ಯೋಧರ ತ್ಯಾಗ ಬಲಿದಾನಕ್ಕೆ ಮೌಲ್ಯ ಕಟ್ಟಲಾಗದು, ಅವರ ಹೋರಾಟ, ಕರ್ತವ್ಯ ನಿಷ್ಟೆ ಊಹೆಗೂ ನಿಲುಕದ್ದು ಎಂದರಲ್ಲದೇ, ಸೈನಿಕರು ಅಥವಾ ಮಾಜಿ ಸೈನಿಕರನ್ನು ಕಂಡಾಗ ಅವರನ್ನು ಗೌರವಿಸುವಂತಾಗಬೇಕೆAದರು.
ಮನಸೆಳೆದ ದೇಶಭಕ್ತಿ ಗೀತೆಗಳು
ಕಾರ್ಗಿಲ್ ವಿಜಯ ದಿನದ ಅಂಗವಾಗಿ ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್, ಸಂಧ್ಯಾ ಚಿದ್ವಿಲಾಸ್ ಅವರು ಕಾರ್ಯಕ್ರಮದಲ್ಲಿ ಹಾಡಿದ ರಾಷ್ಟçದೇವಗೆ... ಪ್ರಾಣದೀವಿಗೆ... ಸೇವೆಯಾಗಲಿ ನಾಡಿಗೆ... ಎಂಬ ದೇಶ ಭಕ್ತಿಗೀತೆ ಮನ ಸೆಳೆಯಿತು. ಇದೇ ಕಾರ್ಯಕ್ರಮದಲ್ಲಿ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅನೇಕ ದೇಶಭಕ್ತಿಗೀತೆಗಳನ್ನು ಉಪನ್ಯಾಸಕಿ ಕೆ. ಜಯಲಕ್ಷ್ಮಿ ಮಾರ್ಗದರ್ಶನದಲ್ಲಿ ಹಾಡಿ ಗಮನ ಸೆಳೆದರು. ೫ ವರ್ಷದ ಮಿನುಗು ಭಾರತದ ತಿರಂಗದ ಮಹತ್ವದ ಬಗ್ಗೆ ತೊದಲು ನುಡಿಯಲ್ಲಿಯೇ ಹಾಡಿ ಮೆಚ್ಚುಗೆ ಗಳಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧು, ಕಾರ್ಯದರ್ಶಿ ಕಟ್ಟೆಮನೆ ಸೋನಾಜಿತ್, ವಲಯ ಸೇನಾನಿ ಅನಿತಾ ಪೂವಯ್ಯ, ಕಾರ್ಯಕ್ರಮ ಸಂಚಾಲಕ ಅನಿಲ್ ಎಚ್.ಟಿ., ಪ್ರಮುಖರಾದ ಬಿ.ಜಿ. ಅನಂತಶಯನ, ಕೇಶವಪ್ರಸಾದ್ ಮುಳಿಯ, ಡಾ. ಚೆರಿಯಮನೆ ಪ್ರಶಾಂತ್, ಕೆ.ಕೆ. ವಿಶ್ವನಾಥ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್, ಯೋಗ ಗುರು ಕೆ.ಕೆ. ಮಹೇಶ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಸದಸ್ಯೆ ಸಬಿತಾ, ಸ್ಕೌಟ್ ಮತ್ತು ಗೌಡ್ಸ್ನ ಸಂಚಾಲಕ ರಂಜಿತ್, ರಮೇಶ್ ಹೊಳ್ಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.