ಸೋಮವಾರಪೇಟೆ, ಜು. ೨೬: ತಾಲೂಕಿನಾದ್ಯಂತ ಮಳೆ ತನ್ನ ರುದ್ರನರ್ತನ ಮುಂದುವರೆಸಿದೆ. ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿರುವ ಹಿನ್ನೆಲೆ ಹಾನಿ ಪ್ರಕರಣಗಳು ಹೆಚ್ಚುತ್ತಿವೆ. ಅತಿಶೀತಕ್ಕೆ ವಾಸದ ಮನೆಗಳು ಕುಸಿಯುತ್ತಿದ್ದು, ಮರಗಳು ಮನೆ- ರಸ್ತೆಗುರುಳಿ ಆತಂಕದ ಸನ್ನಿವೇಶವನ್ನು ಮುಂದುವರೆಸಿದೆ.

ನಿನ್ನೆ ದಿನ ಬೆಳಿಗ್ಗೆ ಸೋಮವಾರಪೇಟೆ- ಶಾಂತಳ್ಳಿ- ಸುಬ್ರಹ್ಮಣ್ಯ ರಸ್ತೆಯ ಜೇಡಿಗುಂಡಿ ಬಳಿಯಲ್ಲಿ ಗುಡ್ಡ ಕುಸಿದಿದ್ದು, ಇಂದು ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಬರೆಕುಸಿತ ಉಂಟಾಗಿದೆ. ರಸ್ತೆಯ ಒಂದು ಬದಿಯಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು, ರಸ್ತೆಯನ್ನು ಮುಚ್ಚಿದೆ. ನಿನ್ನೆ ದಿನ ಬೆಳಿಗ್ಗೆಯಿಂದ ಸಂಜೆ ಯವರೆಗೂ ಯಂತ್ರಗಳ ಸಹಾಯ ದಿಂದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

ಸಂಜೆ ೭ ಗಂಟೆಯವರೆಗೂ ನಡೆದ ಕಾರ್ಯಾಚರಣೆಯಲ್ಲಿ ಶೇ.೬೦ರಷ್ಟು ಮಣ್ಣನ್ನು ಸಾಗಿಸಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ರಾತ್ರಿ ವೇಳೆ ಮತ್ತೆ ಭೂ ಕುಸಿತವಾಗಿದ್ದು, ಇಂದು ಸಂಪೂರ್ಣ ರಸ್ತೆ ಮುಚ್ಚಿದೆ. ಪರಿಣಾಮ ಸೋಮವಾರಪೇಟೆ-ಯಡೂರು-ಶಾಂತಳ್ಳಿ ಸಂಪರ್ಕ ತಡೆಯಾಗಿದೆ.

ಮಣ್ಣು ತೆರವುಗೊಳಿಸುವ ಕಾರ್ಯ ಇಂದೂ ಸಹ ಮುಂದುವರೆದಿದ್ದು, ಭಾರೀ ಮಳೆ, ಗಾಳಿಯಿಂದಾಗಿ ಆಗಾಗ್ಗೆ ಮಣ್ಣು ಕುಸಿಯುತ್ತಿದೆ ಎಂದು ಸ್ಥಳೀಯರಾದ ಕೆ.ಎಂ. ಲೋಕೇಶ್ ತಿಳಿಸಿದ್ದಾರೆ. ಶಾಂತಳ್ಳಿಯ ಕೆ.ಟಿ. ವಿಜಯಕುಮಾರ್ ಎಂಬವರಿಗೆ ಸೇರಿದ ತೋಟವನ್ನು ಕಳೆದ ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿನ ವ್ಯಕ್ತಿಗೆ ಮಾರಾಟ ಮಾಡಿದ್ದು, ಈ ಜಾಗ ಇದೀಗ ಕುಸಿಯಲಾರಂಭಿಸಿದೆ. ತಕ್ಷಣಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ರಾಜ್ಯ ಹೆದ್ದಾರಿಯೂ ಕುಸಿತವಾಗಿ ಸಂಪರ್ಕ ಕಡಿತಗೊಳ್ಳುವ ಅಪಾಯವಿದೆ.

(ಮೊದಲ ಪುಟದಿಂದ) ಸ್ಥಳಕ್ಕೆ ಶನಿವಾರಸಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ್ದಾರೆ.

ಭಾರೀ ಗಾಳಿಗೆ ಪಟ್ಟಣದ ಎಂ.ಜಿ. ರಸ್ತೆಯ ಮಲ್ಲಿಕಾರ್ಜುನ ಅವರ ಮನೆಯ ಮೇಲ್ಭಾಗ ಅಳವಡಿಸಿದ್ದ ಜಿಂಕ್ ಶೀಟ್‌ಗಳು ಹಾರಿ ಪಕ್ಕದಲ್ಲಿರುವ ಅಶೋಕ್ ಮತ್ತು ಲೋಕೇಶ್ ಅವರುಗಳಿಗೆ ಸೇರಿದ ಮನೆಯ ಮೇಲೆ ಬಿದ್ದು ಹಾನಿಯಾಗಿದೆ. ಆರ್‌ಸಿಸಿ ಛಾವಣಿಯಲ್ಲಿ ನೀರು ಸೋರಿಕೆಯಾಗದಂತೆ ಮೇಲ್ಭಾಗ ಪಿಲ್ಲರ್ ಹಾಕಿ ಅಳವಡಿಸಿದ್ದ ಶೀಟ್‌ಗಳು, ಭಾರೀ ಗಾಳಿಗೆ ಪಿಲ್ಲರ್ ಸಹಿತ ಕಿತ್ತು ಬಂದು ಹಾರಿದೆ. ಸ್ಥಳಕ್ಕೆ ತಹಶೀಲ್ದಾರ್ ನವೀನ್‌ಕುಮಾರ್, ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯಾಧಿಕಾರಿ ಜಾಸಿಂ ಖಾನ್, ಸದಸ್ಯರಾದ ಶೀಲಾ ಡಿಸೋಜ, ಪಿ.ಕೆ. ಚಂದ್ರು ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡ್ಲಿಪೇಟೆ ಹೋಬಳಿ ಶಿವರಳ್ಳಿ ಗ್ರಾಮದ ಲಕ್ಷö್ಮಮ್ಮ ತಮ್ಮೇಗೌಡ ಅವರ ವಾಸದ ಮನೆಯು ಅತಿ ಮಳೆ, ಗಾಳಿಗೆ ಹಾನಿಯಾಗಿದೆ. ಶೀತದಿಂದಾಗಿ ವಾಸದ ಮನೆಯ ಒಂದು ಪಾರ್ಶ್ವ ಹಾನಿಯಾಗಿದ್ದು, ಮನೆಯ ಮೇಲ್ಛಾವಣಿ ಕುಸಿದುಬಿದ್ದು ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡ್ಲಿಪೇಟೆ ಹೋಬಳಿ ಸಂಪಿಗೆದಾಳು ಗ್ರಾಮದ ಭಾಗ್ಯ ಧರ್ಮಪ್ಪ ಅವರ ವಾಸದ ಮನೆಯ ಒಂದು ಭಾಗ ಗಾಳಿ ಮಳೆಗೆ ಕುಸಿದು ಹಾನಿಯಾಗಿದೆ. ಶನಿವಾರಸಂತೆ ಹೋಬಳಿಯ ಒಡೆಯನಪುರ ಗ್ರಾಮದ ಗೌರಮ್ಮ ಅವರ ಮನೆ ಮಳೆಯಿಂದಾಗಿ ಹಾನಿಗೀಡಾಗಿದೆ. ಶನಿವಾರಸಂತೆ ಮುಖ್ಯರಸ್ತೆಯಲ್ಲಿ ವಾಸವಿರುವ ಬಿಲಾಳ ಅವರ ವಾಸದ ಮನೆಯ ಮುಂಭಾಗದ ಗೋಡೆ ಸಂಪೂರ್ಣ ಕುಸಿದಿದೆ. ಪರಿಣಾಮ ಛಾವಣಿ ನೆಲಕ್ಕಚ್ಚಿದ್ದು, ನಷ್ಟ ಸಂಭವಿಸಿದೆ.

ಪಟ್ಟಣದ ಕಕ್ಕೆಹೊಳೆ ತುಂಬಿ ಹರಿಯುತ್ತಿದ್ದು, ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದ್ಮ ಕ್ಯಾಂಟೀನ್ ಹಿಂಭಾಗದ ಕಾವೇರಿ ಬಡಾವಣೆಯಲ್ಲಿ ಹೊಳೆ ನೀರು ಮನೆಗಳಿಗೆ ನುಗ್ಗಿದೆ. ಹೊಳೆಪಾತ್ರದಲ್ಲಿರುವ ಕೃಷ್ಣ ಅವರ ವಾಸದ ಮನೆ, ದೇವಾಲಯ ಆವರಣ ನೀರಿನಿಂದ ಆವೃತವಾಗಿದೆ.

ಅಭಿಮಠ ಬಾಚಳ್ಳಿಯಲ್ಲಿರುವ ಹೊಳೆ ತುಂಬಿ ಹರಿಯುತ್ತಿದ್ದು, ಅಭಿಮಠ ಹೊಳೆಯ ಜಲಪಾತ ಭೋರ್ಗರೆಯುತ್ತಿದೆ. ಹೊಳೆಯ ನೀರು ಅಕ್ಕಪಕ್ಕದ ಗದ್ದೆಗಳಿಗೆ ನುಗ್ಗಿದ್ದು, ನಾಟಿ ಮಾಡಿದ್ದ ಕೃಷಿ ಪ್ರದೇಶ ಜಲಾವೃತಗೊಂಡಿದೆ. ಗದ್ದೆಗಳ ಮೇಲೆ ಹೊಳೆ ನೀರು ಹರಿಯುತ್ತಿದೆ. ಯಡೂರಿನಲ್ಲಿ ಕಕ್ಕೆಹೊಳೆ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಬಿಟಿಸಿಜಿ ಕಾಲೇಜಿನ ಮುಂಭಾಗವಿರುವ ಮುತ್ತಣ್ಣ, ಈರಪ್ಪ ಸೇರಿದಂತೆ ಇತರರಿಗೆ ಸೇರಿದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಇAದು ಬೆಳಿಗ್ಗೆ ಭಾರೀ ಗಾಳಿಗೆ ಶನಿವಾರಸಂತೆ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹೊನ್ನವಳ್ಳಿಯಲ್ಲಿ ಬೃಹತ್ ಗಾತ್ರದ ಮರ ಬಿದ್ದು, ಸಂಚಾರ ಸ್ಥಗಿತಗೊಂಡಿತ್ತು. ನಂತರ ಸ್ಥಳೀಯರು ಯಂತ್ರಗಳ ಸಹಾಯದಿಂದ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹೊಸತೋಟ ಗ್ರಾಮದ ರಾಧಾ ರಾಮಕೃಷ್ಣ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಭಾರೀ ಮಳೆಗೆ ಕುಸಿದಿದೆ. ಮಾದಾಪುರ ಹೊಳೆಯು ಅಪಾಯ ಮಟ್ಟದಲ್ಲಿದ್ದು, ಹೊಳೆ ಪಾತ್ರದ ತಗ್ಗುಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಕಾರೇಕಾಡ್ ರಸ್ತೆ ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಕಳೆದ ೨೪ ಗಂಟೆಗಳಲ್ಲಿ ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೮೬.೬ ಮಿ.ಮೀ., ಶಾಂತಳ್ಳಿಗೆ ೨೦೦, ಕುಶಾಲನಗರಕ್ಕೆ ೧೭.೬, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೆ ೧೨೨.೮, ಶನಿವಾರಸಂತೆಗೆ ೭೩ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ. - ವಿಜಯ್ ಹಾನಗಲ್