ಕೂಡಿಗೆ, ಜು. ೨೭ : ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನ ಭತ್ತದ ಗದ್ದೆಗಳಲ್ಲಿ ನಾಟಿ ಕಾರ್ಯ ಮಾಡುವ ಉದ್ದೇಶದಿಂದ ಈಗಾಗಲೇ ಮೂರು ತಿಂಗಳ ಬೆಳೆಗಳಾದ ವಿವಿಧ ಬಗೆಯ ಹೈಬ್ರೀಡ್ ತಳಿಯ ಭತ್ತದ ಬೀಜಗಳನ್ನು, ಸಸಿ ಮಡಿಗಳ ಸಿದ್ಧತೆ ಜೊತೆಯಲ್ಲಿ ಟ್ರಾö್ಯಕ್ಟರ್ ಮೂಲಕ ನಾಟಿ ಗದ್ದೆಗಳನ್ನು ಸಿದ್ಧತೆ ಮಾಡುವಲ್ಲಿ ತೊಡಗಿದ್ದಾರೆ.
ಜಿಲ್ಲೆಯ ಅಚ್ಚುಕಟ್ಟು ಪ್ರದೇಶ ಗ್ರಾಮಗಳಾದ. ಹುದುಗೂರು, ಮದಲಾಪುರ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೫ ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ರೈತರು ಮಳೆಯ ನೀರನ್ನು ಅವಲಂಬಿಸಿ ಭತ್ತದ ಸಸಿ ಮಡಿಗಳನ್ನು ಸಿದ್ದತೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಾಲೆಗಳ ಮೂಲಕ ಇಲಾಖೆಯವರು ಬೇಸಾಯಕ್ಕೆ ನೀರು ಹರಿಸುವ ಮುನ್ನವೆ ನಾಟಿ ಗದ್ದೆಗಳನ್ನು ಸಿದ್ದತೆ ಮಾಡಿಕೊಂಡು ಈ ವ್ಯಾಪ್ತಿಯ ಹೈಬ್ರೀಡ್ ತಳಿಯ ಭತ್ತದ ಸಸಿ ಮಡಿಗಳ ಸಿದ್ದತೆಯ ಜೊತೆಯಲ್ಲಿ ನಾಟಿ ಕಾರ್ಯ ಮಾಡಲು ವ್ಯವಸ್ಥೆಗಳನ್ನು ಮಾಡಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಈಗಾಗಲೇ ಪ್ರಥಮ ಹಂತದ ಕೃಷಿ ಚಟುವಟಿಕೆಯಲ್ಲಿ ಈ ಸಾಲಿನಲ್ಲಿ ಹೆಚ್ಚು ಸಾವಯವ ಗೊಬ್ಬರ ಮತ್ತು ಹಸಿರು ಗೊಬ್ಬರವನ್ನು ಬಳಕೆ ಮಾಡುವ ದೃಷ್ಟಿಯಿಂದ ಅನೇಕ ರೈತರು ಕೃಷಿ ಇಲಾಖೆಯ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ರಂಜಕ ಮತ್ತು ಸುಣ್ಣವನ್ನು ಜಮೀನಿನಲ್ಲಿ ಬೆರಸಿ ಉಳುಮೆ ಮಾಡುತ್ತಿದ್ದಾರೆ. ನಾಲೆಯಲ್ಲಿ ನೀರು ಬಂದ ತಕ್ಷಣವೇ ಗದ್ದೆಗಳಗೆ ಉಪ ಕಾಲುವೆಗಳ ಮೂಲಕ ನೀರನ್ನು ಹಾಯಿಸಿಕೊಂಡು ಉಳುಮೆ ಮಾಡಲು ಸಿದ್ಧರಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ