ಸೋಮವಾರಪೇಟೆ, ಜು. ೨೬: ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಸಂದರ್ಭ, ವಾಸದ ಮನೆಯ ಮೇಲೆ ದಾಳಿ ನಡೆಸಿದ ಘಟನೆ ಕಾಜೂರಿನಲ್ಲಿ ನಡೆದಿದೆ.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ, ಸಜ್ಜಳ್ಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಮಳೆ-ಗಾಳಿಯ ಭಯದೊಂದಿಗೆ ಕಾಡಾನೆಗಳ ಭಯವೂ ಈ ಭಾಗದ ಮಂದಿಯನ್ನು ಕಾಡುತ್ತಿದೆ.

ಕಳೆದ ಒಂದು ವಾರದಿಂದಲೂ ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಆರಂಭಿಸಿದ ಕೆಲ ಸಮಯದಲ್ಲೇ ಕಾಡಾನೆಯು ವಾಸದ ಮನೆಯ ಮೇಲೆ ದಾಳಿ ನಡೆಸಿದೆ ಕಾಜೂರು ಗ್ರಾಮದ ವಿಶ್ವನಾಥ್ ಅವರ ಮನೆಯ ಛಾವಣಿಯನ್ನು ಎಳೆದು ಪುಡಿಗಟ್ಟಿರುವ ಕಾಡಾನೆ, ಶೆಡ್ ಅನ್ನು ದ್ವಂಸಗೊಳಿಸಿದೆ. ನಂತರ ಮನೆಯ ಸುತ್ತಮುತ್ತ ಓಡಾಡಿದೆ. ಈ ಸಂದರ್ಭ ಮನೆಯ ಬಳಿ ನಿಲ್ಲಿಸಿದ್ದ ಎರಡು ಬೈಕ್ ಅನ್ನು ಜಖಂಗೊಳಿಸಿ ತೆರಳಿದೆ.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಇವುಗಳ ಉಪಟಳ ತಡೆಯಲೆಂದು ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ರೈಲ್ವೇ ಬ್ಯಾರಿಕೇಡ್ ಪ್ರಯೋಜನಕ್ಕೆ ಬರುತ್ತಿಲ್ಲ. ರೈಲ್ವೇ ಬ್ಯಾರಿಕೇಡ್‌ಗಳನ್ನು ಕಿತ್ತು, ದಾಟಿ ಕಾಡಾನೆಗಳು ಗ್ರಾಮಕ್ಕೆ ಬರುತ್ತಿವೆ.

ಈ ಬ್ಯಾರಿಕೇಡ್‌ಗಳನ್ನು ಕಾಪಾಡಿಕೊಳ್ಳಲು ಅರಣ್ಯ ಇಲಾಖೆಯಿಂದ ಸೋಲಾರ್ ತಂತಿಗಳನ್ನು ಹಾಕಿದ್ದು, ಇವುಗಳನ್ನು ಕಳೆದ ಒಂದು ವಾರದ ಹಿಂದೆಯೇ ಕಿತ್ತೆಸೆದಿವೆ. ಬ್ಯಾರಿಕೇಡ್ ಗೇಟ್ ಅನ್ನು ಕಿತ್ತು ಕಾಡಾನೆಗಳು ಗ್ರಾಮಕ್ಕೆ ಬರುತ್ತಿವೆ. ಇಂದು ಮನೆಯ ಮೇಲೆ ದಾಳಿ ನಡೆಸಿದ ಕಾಡಾನೆ ಬ್ಯಾರಿಕೇಡ್ ದಾಟಿ ಗ್ರಾಮಕ್ಕೆ ಬಂದಿದೆ. ವಾಪಸ್ ತೆರಳುವ ಸಂದರ್ಭ ಜಾನುವಾರಿನ ಮೇಲೆ ದಾಳಿ ನಡೆಸಿದ್ದು, ಅದು ಓಡಿ ತಪ್ಪಿಸಿಕೊಂಡಿದೆ. ಮನೆ ಮಂದಿ ಜೀವ ಭಯದಿಂದ ಮನೆಯೊಳಗೆ ಕುಳಿತಿದ್ದು, ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದೆ.

ಐಗೂರು, ಕಾಜೂರು, ಯಡವಾರೆ, ಸಜ್ಜಳ್ಳಿ ಭಾಗದಲ್ಲಿ ಈ ಹಿಂದೆ ಬೇಸಿಗೆ ಸಮಯದಲ್ಲಿ ಮಾತ್ರ ಎದುರಾಗುತ್ತಿದ್ದ ಕಾಡಾನೆಗಳು ಈ ಬಾರಿ ಮಳೆಗಾಲದಲ್ಲೂ ಗ್ರಾಮಕ್ಕೆ ಲಗ್ಗೆಯಿಡುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ಈ ಭಾಗದಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ಇದ್ದರೂ ಸಹ ಕೋವಿ, ಪಟಾಕಿಗಳಿಲ್ಲ. ಬಾಯಿಯಲ್ಲಿ ಬೊಬ್ಬೆ ಹೊಡೆದು ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಸ್ಥಿತಿಯಿದೆ.

ಸದ್ಯ ಸಜ್ಜಳ್ಳಿಯಲ್ಲಿ ಮರಿಯಾನೆ ಸಹಿತ ಮೂರು ಕಾಡಾನೆಗಳು, ಕಾಜೂರು ಭಾಗದಲ್ಲಿ ಒಂಟಿ ಆನೆ, ಕೋವರ್ ಕೊಲ್ಲಿ- ಕಾಜೂರು ಜಂಕ್ಷನ್ ನಡುವೆ 'ರೌಡಿ ರಂಗ' ಹೆಸರಿನ ಮತ್ತೊಂದು ಆನೆ ಬೀಡುಬಿಟ್ಟಿವೆ. ಕಾಡಾನೆಗಳ ಉಪಟಳದಿಂದ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ನಾಮಕಾವಸ್ಥೆಗೆ ಮಾತ್ರ ಕೆಲಸ ನಿರ್ವಹಿಸುತ್ತಿದೆ. ಜನವಸತಿಯಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಅರಣ್ಯಕ್ಕೆ ಅಟ್ಟಿ, ಮತ್ತೆ ವಾಪಸ್ ಬರದಂತೆ ಕ್ರಮ ಕೈಗೊಳ್ಳುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.