ಗೋಣಿಕೊಪ್ಪಲು. ಜು.೨೭: ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ದಿಢೀರನೆ ಎದುರಾದ ಕಾಡಾನೆಯಿಂದ ತನ್ನ ಸಮಯ ಪ್ರಜ್ಞೆಯ ಮೂಲಕ ಕೂದಲೆಳೆಯ ಅಂತರದಲ್ಲಿ ತೋಟದ ರೈಟರ್ ತಪ್ಪಿಸಿಕೊಂಡ ಘಟನೆ ಮಾಯಮುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳಾಜಿ ಗ್ರಾಮದಲ್ಲಿ ನಡೆದಿದೆ.

ಕಾಡಾನೆ ದಾಳಿಯ ವೇಳೆ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಕುತ್ತಿಗೆಯ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟಾದ ಕಿರಿಯಮಾಡ ಹರೀಶ್ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ ನಿವಾಸಿ ಕಿರಿಯಮಾಡ ಹರೀಶ್ ಎಂಬವರು ಮಾಯಮುಡಿ ಸಮೀಪದ ಬಾಳಾಜಿ ಗ್ರಾಮದ ಕಾಫಿ ತೋಟದಲ್ಲಿ ಹಲವು ವರ್ಷಗಳಿಂದ ರೈಟರ್ ಕೆಲಸ ನಿರ್ವಹಣೆ ಮಾಡುತ್ತಿದ್ದರು.

ಶನಿವಾರ ಎಂದಿನAತೆ ತನ್ನ ಕೈಕೇರಿ ಮನೆಯಿಂದ ತೋಟಕ್ಕೆ ತೆರಳಿದ್ದ ಹರೀಶ್, ಸಂಜೆಯ ವೇಳೆ ಕೆಲಸ ಮುಗಿಸಿ, ಇನ್ನೇನು ತೋಟದಿಂದ ಹೊರಬರುತ್ತಿದ್ದ ವೇಳೆ ದಿಢೀರನೆ ಕಾಡಾನೆ ಕಾಣಿಸಿಕೊಂಡಿದೆ. ತೋಟದಲ್ಲಿದ್ದ ರೈಟರ್ ಹರೀಶ್‌ನನ್ನು ಕಂಡ ಕಾಡಾನೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಸಮಯ ಪ್ರಜ್ಞೆ ತೋರಿದ ಹರೀಶ್ ಅಲ್ಲಿಯೇ ಇದ್ದ ಕಾಫಿ ತೋಟದ ದೊಡ್ಡದಾದ ಗಿಡದ ಮಧ್ಯ ಅವಿತುಕುಳಿತ್ತಿದ್ದಾರೆ.

ರಭಸದಿಂದ ಬಂದ ಕಾಡಾನೆ ಹರೀಶ್ ಅವರನ್ನು ಕಾಣದೆ ಇದ್ದಾಗ ಸಿಟ್ಟಿನಿಂದ ನೆಲವನ್ನು ಒದ್ದು ಅಲ್ಲಿಂದ ಮುಂದೆ ಸಾಗಿದೆ. ಈ ವೇಳೆ ಆನೆಯ ಕಾಲಿನ ಬಳಿಯೇ ಕಾಫಿ ಗಿಡದ ಮಧ್ಯ ಧೈರ್ಯದಿಂದ ಕುಳಿತಿದ್ದ ಹರೀಶ್ ಅವರ ಕುತ್ತಿಗೆಯ ಭಾಗಕ್ಕೆ ಪೆಟ್ಟಾಗಿದೆ.

ಕಾಡಾನೆ ಸ್ವಲ್ಪ ದೂರ ಸಾಗಿದ ನಂತರ ಕೆಲವರ ಸಹಾಯದಿಂದ ಕಾಫಿ ತೋಟದಿಂದ ಗೋಣಿಕೊಪ್ಪ ಸಮೀಪದ ಅತ್ತೂರು ಬಳಿಯ ಲೋಪಾಮುದ್ರಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

`ಶಕ್ತಿ'ಯೊಂದಿಗೆ ಮಾತನಾಡಿದ ಹಿರಿಯ ಬೆಳೆಗಾರ ಜಮ್ಮಡ ಮೋಹನ್ ಕಾಡಾನೆಗಳ ಉಪಟಳ ಹೇಳತೀರದಾಗಿದೆ. ತೋಟಕ್ಕೆ ತೆರಳಲು ಕಾರ್ಮಿಕರು ಮುಂದೆ ಬರುತ್ತಿಲ್ಲ. ಅರಣ್ಯ ಇಲಾS ಕೂಡಲೇ ಕಾಫಿ ತೋಟದಲ್ಲಿ ಇರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕೆಲಸ ಮಾಡುವಂತೆ ಒತ್ತಾಯಿಸಿದರು.

ಸುದ್ದಿ ತಿಳಿದ ತಿತಿಮತಿ ವಲಯ ಅರಣ್ಯ ಅಧಿಕಾರಿಗಳಾದ ಆರ್‌ಎಫ್‌ಒ ಗಂಗಾಧರ್, ಡಿಆರ್‌ಎಫ್‌ಓ ದಿವಾಕರ್, ಜಿ.ಎಸ್. ಪ್ರಶಾಂತ್ ಹಾಗೂ ಇತರೆ ಅಧಿಕಾರಿಗಳು ಗಾಯಾಳು ಹರೀಶ್ ಯೋಗಕ್ಷೇಮ ವಿಚಾರಿಸಿದರು.

ಇಲಾಖೆಯ ವತಿಯಿಂದ ಆನೆ ಕಾರ್ಯಾಚರಣೆ ಮಾಡಲಾಗುತ್ತದೆ. ಗಾಯಾಳುವಿನ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಇಲಾಖೆಯು ಭರಿಸಲಿದೆ ಎಂದು `ಶಕ್ತಿ'ಗೆ ತಿಳಿಸಿದರು. - ಹೆಚ್.ಕೆ.ಜಗದೀಶ್