ನಾಪೋಕ್ಲು, ಜು. ೨೭: ಸಮೀಪದ ಪಾರಾಣೆ ಗ್ರಾಮ ಪಂಚಾಯಿತಿಯ ಕಿರುಂದಾಡು ಗ್ರಾಮದ ತೋಟಗಳಿಗೆ ೪-೫ ಆನೆಗಳ ಗುಂಪು ಗುರುವಾರ ರಾತ್ರಿ ಧಾಳಿ ಮಾಡಿದ್ದು ಕಾಫಿ ತೋಟ ಹಾಗೂ ಬೆಳೆಗೆ ನಷ್ಟ ಸಂಭವಿಸಿದೆ.

ಗ್ರಾಮದ ಕಾಫಿ ಬೆಳೆಗಾರ ನಾಳಿಯಂಡ ಪ್ರಭು ಎಂಬವರ ಹಾಗೂ ಇತರ ತೋಟದ ಕಾಫಿ ಗಿಡಗಳ ರೆಂಬೆಗಳನ್ನು ಕಾಡಾನೆಗಳು ಮುರಿದು ಹಾಕಿ, ತೆಂಗಿನ ಗಿಡಗಳನ್ನು ತಿಂದು, ತುಳಿದು ನಾಶಪಡಿಸಿವೆ. ಆನೆ ಧಾಳಿಯಿಂದ ಫಸಲು ಭರಿತ ಗಿಡಗಳು ನಾಶವಾಗಿವೆ.

ಸಂಜೆ ಮತ್ತು ಬೆಳಗಿನ ಹೊತ್ತಿನಲ್ಲಿ ಕಾಡಾನೆಗಳು ಇಲ್ಲಿನ ಕೋಕೇರಿ ರಸ್ತೆಯಲ್ಲಿ ಅಡ್ಡಾಡುತ್ತಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳೆಗಾರ ನಾಳಿಯಂಡ ಪ್ರಭು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.