ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಪರೀಕ್ಷೆಗೆ ವಯೋಮಿತಿ ಸಡಿಲಿಕೆ

ಬೆಂಗಳೂರು, ಜು. ೨೬: ೨೦೧೭-೧೮ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ ನೀಡಲು ಮತ್ತು ೨೦೨೩-೨೪ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಪರೀಕ್ಷೆಗೆ ವಯೋಮಿತಿ ಸಡಿಲಿಸಿ ಅರ್ಜಿ ಹಾಕಲು ವಿಶೇಷ ಅವಕಾಶ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್, ಖಾಲಿ ಇರುವ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳನ್ನು ಹಲವು ವರ್ಷಗಳಿಂದ ಭರ್ತಿ ಮಾಡುವ ಕಾರ್ಯ ಆಗಿರಲಿಲ್ಲ. ಈ ಮಧ್ಯೆ ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಗೆ ನೇಮಕಾತಿ ವಿಳಂಬವಾಗಿತ್ತು. ಈ ಬಾರಿ ೨೦೨೩-೨೪ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಗರಿಷ್ಠ ಮೂರು ವರ್ಷ ವಯೋಮಿತಿ ಸಡಿಲಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ೨೦೨೩-೨೪ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಆಕಾಂಕ್ಷಿಗಳಾಗಿರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ೩೫ ವರ್ಷ ಬದಲಾಗಿ ೩೮ ವರ್ಷದವರೆಗೆ, ಒಬಿಸಿ ವರ್ಗದವರಿಗೆ ೩೮ ವರ್ಷ ಬದಲಿಗೆ ೪೧ ವರ್ಷದವರೆಗೆ, ಎಸ್‌ಸಿ / ಎಸ್‌ಟಿ / ಪ್ರವರ್ಗ-೧ ಅಭ್ಯರ್ಥಿಗಳಿಗೆ ೪೦ ವರ್ಷದ ಬದಲಿಗೆ ೪೩ ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆದರೆ ಈ ನಿಯಮವು ಈ ಬಾರಿಗೆ ಮಾತ್ರ ಅನ್ವಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ

ಬೆಂಗಳೂರು, ಜು. ೨೬: ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಾಕರಣ ಮಾಡಲಾಗಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಅವರು, ಜನರ ಅಪೇಕ್ಷೆಯಂತೆ ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ ಎಂದರು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ರಾಮನಗರ ಜಿಲ್ಲೆಯ ಕಾಂಗ್ರೆಸ್ ನಾಯಕರ ನಿಯೋಗ ಭೇಟಿಯಾಗಿತ್ತು. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿತ್ತು. ಇದೀಗ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್

ಬೆಂಗಳೂರು, ಜು. ೨೬: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ತಾ. ೩೧ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ ಪತ್ನಿ ಶಾಲಿನಿ ರಜನೀಶ್ ಅವರನ್ನು ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ಶುಕ್ರವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಅವರು, ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್‌ರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದರು. ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಇನ್ನು ಐದು ದಿನದಲ್ಲಿ ನಿವೃತ್ತಿ ಆಗುತ್ತಾರೆ. ಹೀಗಾಗಿ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್‌ರನ್ನು ನೇಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದರು.

ಅಮೇರಿಕಾ ಅಧ್ಯಕ್ಷ ಚುನಾವಣೆ: ಕಮಲಾ ಹ್ಯಾರಿಸ್‌ಗೆ ಒಬಾಮಾ ಬೆಂಬಲ

ವಾಷಿAಗ್ಟನ್, ಜು. ೨೬: ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಒಬಾಮಾ ಅವರು ಅಧ್ಯಕ್ಷೀಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿದ್ದಾರೆ. ಅಲ್ಲದೆ ಕಮಲಾ ಹ್ಯಾರಿಸ್ ಅಮೇರಿಕಾದ ಅದ್ಭುತ ಅಧ್ಯಕ್ಷೆ ಎಂದು ಸಾಬೀತುಪಡಿಸುತ್ತಾರೆ ಎಂದು ಹೇಳಿದರು. ನವೆಂಬರ್‌ನಲ್ಲಿ ನಡೆಯುವ ಚುನಾವಣೆಗಳನ್ನು ಗೆಲ್ಲಲು ನಿಮಗೆ ಸಹಾಯ ಮಾಡಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ಕಮಲಾ ಹ್ಯಾರಿಸ್‌ಗೆ ಬರಾಕ್ ಒಬಾಮಾ ಹೇಳಿದ್ದಾರೆ. ಒಬಾಮಾ ದಂಪತಿಯ ಬೆಂಬಲದ ನಂತರ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ದೇಶದ ಇಬ್ಬರು ಅತ್ಯಂತ ಜನಪ್ರಿಯ ಡೆಮೋಕ್ರಾಟ್‌ಗಳ ಗಮನಾರ್ಹ ಬೆಂಬಲವನ್ನು ಪಡೆದಿದ್ದಾರೆ. ಅಧ್ಯಕ್ಷ ಜೋ ಬೈಡನ್ ಅಧ್ಯಕ್ಷೀಯ ಉಮೇದುವಾರಿಕೆ ಸ್ಪರ್ಧೆಯಿಂದ ಹೊರಬಿದ್ದ ದಿನಗಳ ನಂತರ, ಒಬಾಮಾ ೫೯ ವರ್ಷದ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿದ್ದಾರೆ.