ಐಗೂರು : ಈ ಬಾರಿ ಪುಷ್ಯ ಮಳೆಯ ಆರ್ಭಟ ರಭಸವಾಗಿದ್ದು ಐಗೂರಿನ ಚೋರನ ಹೊಳೆ ತುಂಬಿ ಹರಿಯುತ್ತಿದೆ. ಮಳೆ ಮತ್ತು ಗಾಳಿ ಹೆಚ್ಚಾದ ಕಾರಣ ಐಗೂರು, ಯಡವಾರೆ, ಹೊಸತೋಟ, ಕಿರಗಂದೂರು ಮತ್ತು ಕುಂಬೂರು ವ್ಯಾಪ್ತಿಯ ಗ್ರಾಮಗಳ ಜನರ ಬದುಕಿನ ಚಿತ್ರಣವೇ ಬದಲಾಗಿದೆ. ಈ ವ್ಯಾಪ್ತಿಯಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆ ತಲೆದೋರಿದ್ದು, ಈ ಭಾಗದ ಜನರು ಕಗ್ಗತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಐಗೂರಿನ ಗಡಿಭಾಗದ ದುರ್ಗಾ ನಗರದಲ್ಲಿ ಹೊಳೆಯಿಂದ ನೀರು ನೂತನ ಸೇತುವೆಯ ಭಾಗದಲ್ಲಿ ರಸ್ತೆಯ ಮೇಲೆ ಆಗಾಗ ಏರಿಳಿತದ ಆಟ ಆಡುತ್ತಿದೆ. ಕಬ್ಬಿಣ ಸೇತುವೆಯ ಹೊಳೆ ಬದಿಯ ನಿವಾಸಿ ಹರೀಶ್ ಕುಮಾರ್ ಅವರ ಮನೆ ಜಲಾವೃತಗೊಂಡಿದೆ. ಐಗೂರಿನ ಹೊನ್ನಪ್ಪನವರ ಮನೆಯ ಹಿಂಭಾಗದ ಕೊಟ್ಟಿಗೆಯ ಮೇಲೆ ಮರ ಬಿದ್ದು ಕೊಟ್ಟಿಗೆ ಹಾನಿಗೊಳಗಾಗಿದೆ. ಹೊಸತೋಟದ ರಾಧಾ ಬಾಲಕೃಷ್ಣ ಎಂಬವರ ಮನೆಯ ಒಂದು ಗೋಡೆ ಕುಸಿದಿದೆ. ಮುಂದಿನ ಗೋಡೆಯು ಕುಸಿಯುವ ಹಂತದಲ್ಲಿದ್ದು, ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ನೇಹಾ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಐಗೂರು ಗ್ರಾ.ಪಂ. ಅಧ್ಯಕ್ಷ ಜಿ. ಕೆ. ವಿನೋದ್, ಸದಸ್ಯರಾದ ಬಾರನ ಪ್ರಮೋದ್, ಲಿಂಗೇರಿ ರಾಜೇಶ್, ಮಾಜಿ ಉಪಾಧ್ಯಕ್ಷ ಪ್ರಭಾಕರ, ಹರದೂರು ಗ್ರಾ.ಪಂ. ಉಪಾಧ್ಯಕ್ಷ ಸಲೀಂ, ಮಾದಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಕುಂಬೂರಿನ ಭಾಸ್ಕರ್ ಸಾಯಿ ಮತ್ತು ಕಿರಗಂದೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗಣೇಶ್ ಇವರುಗಳು ಗ್ರಾಮೀಣ ಜನರಿಗೆ ಕಳೆದ ೧೦ ದಿನಗಳಿಂದಲೂ ವಿದ್ಯುತ್ ಪೂರೈಕೆ ಮಾಡದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿದ್ದು, ದೀರ್ಘ ಕಾಲದವರೆಗೆ ಸಮಸ್ಯೆ ಪರಿಹರಿಸದ ಸೆಸ್ಕಾಂ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಹೇಳುವ ಪ್ರಕಾರ ಈ ಭಾಗದಲ್ಲಿ ಮಳೆಯ ರಭಸಕ್ಕಿಂತ ವೇಗವಾಗಿ ಬೀಸುವ ಗಾಳಿಯ ರಭಸಕ್ಕೆ ಮರಗಳ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಆಗಾಗ ಬೀಳುತ್ತಿದ್ದು, ವಿದ್ಯುತ್ ಇಲಾಖೆಯ ಲೈನ್‌ಮೆನ್‌ಗಳು ದಿನವಿಡೀ ಅಪಾಯಕಾರಿ ಕೆಲಸದ ಜೊತೆ ವಿದ್ಯುತ್ತಿಗಾಗಿ ಹರಸಾಹಸ ಪಡುತ್ತಿದ್ದಾರೆ ಎಂಬುದಾಗಿ ಹೇಳುತ್ತಾರೆ.

ಗ್ರಾಮದ ಜನತೆ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇಲ್ಲದೆ ಯಾರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ಮನೆಯೊಳಗೆ ಮೊಂಬತ್ತಿಯ ಬೆಳಕಿನಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯುತ್ ಇಲ್ಲದೆ ಗ್ರಾಮದ ಜನತೆಗೆ ಕುಡಿಯುವ ನೀರಿನ ಸರಬರಾಜು ನಿಂತುಹೋಗಿದ್ದು, ಪಂಚಾಯಿತಿ ಸದಸ್ಯರು ಮತ್ತು ನೀರು ಗಂಟಿಗಳು ದಿನವಿಡೀ ವಿದ್ಯುತ್ತಿನ ಆಗಮನವನ್ನು ಕಾಯುತ್ತಿದ್ದಾರೆ. ಅಲ್ಲಲ್ಲಿ ಜನರು ಕುಡಿಯಲು ಮಳೆ ನೀರನ್ನು ಅವಲಂಬಿಸುವAತಾಗಿದೆ. ಕಾಫಿ ತೋಟಗಳಲ್ಲಿ ಗಾಳಿಯ ರಭಸಕ್ಕೆ ಹೆದರಿ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದ ಕಾರಣ ಕಾರ್ಮಿಕರ ಕುಟುಂಬ ನಿರ್ವಹಣೆ ಅತಂತ್ರವಾಗಿದ್ದು, ಅಗತ್ಯ ವಸ್ತುಗಳಿಗಾಗಿ ಅಂಗಡಿಗಳಲ್ಲಿ ಸಾಲ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಮೂಕ ಪ್ರಾಣಿಗಳಾದ ಹಸು, ಎಮ್ಮೆ, ಆಡುಗಳು ಹೊರಗಡೆ ಮೇಯಲು ಹೋಗದೆ ಕೊಟ್ಟಿಗೆಯೊಳಗೆ ಕಾಲ ಕಳೆಯುವಂತಾಗಿದೆ. ಈ ವ್ಯಾಪ್ತಿಯಲ್ಲಿ ೪೫ ಇಂಚು ಮಳೆಯಾಗಿದ್ದು, ಸತತವಾಗಿ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಐಗೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭಾಕರ ಮತ್ತು ಮಾಜಿ ಸದಸ್ಯ ಕೆ.ಪಿ ಮುತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಒಂದು ವಾರದ ಮಟ್ಟಿಗಾದರೂ ಬಿಡುವು ಸಿಕ್ಕಿ ವಿದ್ಯುತ್‌ನ ಕೊರತೆ ನೀಗಿದರೆ ಈ ಭಾಗದ ಗ್ರಾಮೀಣ ಜನರ ಬದುಕು ಹಸನಾಗಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. -ಸುಕುಮಾರ.