ಮಡಿಕೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ನಿರಂತರವಾಗಿ ಬೀಸುತ್ತಿರುವ ಬಿರುಗಾಳಿಗೆ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳಿಗೆ ಹೆಚ್ಚಿನ ಹಾನಿಯಾಗಿದೆ. ಅತಿಯಾದ ಗಾಳಿ, ಮಳೆಯಿಂದಾಗಿ ವಿರಾಜಪೇಟೆ ಯಿಂದ ಸಿದ್ದಾಪುರ ಕಡೆಗೆ ೩೩ ಕೆವಿ ವಿದ್ಯುತ್ ಮಾರ್ಗದ ಮೇಲೆ ಕಳೆದ ೨೪ ಗಂಟೆಗಳಲ್ಲಿ ನಾಲ್ಕನೇ ಬಾರಿ ಮರ ಬಿದ್ದು ಹಾನಿಯಾಗಿದೆ. ಈಗಾಗಲೇ ಎರಡು ಕಂಬಗಳು ಮುರಿದು ಹೋಗಿದ್ದು, ವಿದ್ಯುತ್ ಪುನ:ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿಯೂ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದ ಕಾರಣ ನಿರ್ವಹಣಾ ಸಿಬ್ಬಂದಿಗಳ ಸುರಕ್ಷತೆಯ ಧೃಷ್ಟಿಯಿಂದ ಅನಿವಾರ್ಯವಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರೆ ಅನಿತಾ ಬಾಯಿ ತಿಳಿಸಿದ್ದಾರೆ.