ಸಿದ್ದಾಪುರ, ಜು. ೨೬: ಕಳೆದ ನಾಲ್ಕು ತಿಂಗಳ ಹಿಂದೆ ದೇವಾಲಯದ ಹುಂಡಿಯನ್ನು ಮುರಿದು ಹಣ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿದ್ದಾಪುರ ಸಮೀಪದ ಅರೆಕಾಡು ಗ್ರಾಮದ ಶ್ರೀ ಐದ್ರೋಡಮ್ಮ ಚಾಮುಂಡೇಶ್ವರಿ ದೇವಾಲಯದಲ್ಲಿ ಕಳೆದ ೨೪.೦೪.೨೦೨೪ರಂದು ಹುಂಡಿಯನ್ನು ಒಡೆದು ಹಣವನ್ನು ಕಳ್ಳತನ ಮಾಡಿರುವುದಾಗಿ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ರವಿಕುಮಾರ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳರು ಕಳ್ಳತನ ಮಾಡುವ ಸಂದರ್ಭದಲ್ಲಿ ದೇವಾಲಯದ ಸುತ್ತಲೂ ಅಳವಡಿಸಿದ್ದ ಸಿ.ಸಿ ಕ್ಯಾಮೆರಾಗಳಿಗೆ ಬಟ್ಟೆಗಳನ್ನು ಮುಚ್ಚಿದ್ದರು. ಕಳ್ಳತನ ಮಾಡಿದ ಆರೋಪಿಗಳ ಸುಳಿವು ಪತ್ತೆ ಆಗಿರಲಿಲ್ಲ.

ಇದೀಗ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬೇರೊಂದು ಪ್ರಕರಣದಲ್ಲಿ ಆರೋಪಿಯಾಗಿರುವ ಕಕ್ಕಬ್ಬೆ ನಾಲಡಿ ಗ್ರಾಮದ ನಿವಾಸಿ ಚಾಲಕ ವೃತ್ತಿಯಲ್ಲಿರುವ ಕೆ.ಸಿ. ಅಶೋಕ (೩೫) ಎಂಬಾತನನ್ನು ಬಂಧಿಸಲಾಗಿದೆ. ಆತನನ್ನು ತನಿಖೆಗೆ ಒಳಪಡಿಸಿದಾಗ ತಾನು ಕುಶಾಲನಗರದ ಗೊಂದಿಬಸವನಹಳ್ಳಿ ನಿವಾಸಿ ಸುಬ್ರಮಣಿಯೊಂದಿಗೆ ಸೇರಿ ಅರೆಕಾಡಿನ ಶ್ರೀ ಚಾಮುಂಡೇಶ್ವರಿ ಐದ್ರೋಡ್ಡಮ್ಮ ದೇವಾಲಯದ ಹುಂಡಿಯನ್ನು ಒಡೆದು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಸುಬ್ರಮಣಿ ಬೇರೊಂದು ಪ್ರಕರಣದಲ್ಲಿ ಭಾಗಿಯಾಗಿದ್ದು, ಈತ ಮೈಸೂರು ಜೈಲಿನಲ್ಲಿ ಇದ್ದಾನೆ. ಆರೋಪಿ ಅಶೋಕನ ವಿರುದ್ಧ ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.