ಸಿದ್ದಾಪುರ, ಜು. ೨೮: ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ಧ್ವಂಸ ಗೊಳಿಸಿರುವ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಏಂಜಲ್ ಫೀಲ್ಡ್ ಕಾಫಿ ತೋಟದೊಳಗೆ ಮರಿಯಾನೆಗಳು ಸೇರಿದಂತೆ ಇಪ್ಪತ್ತು ಅಧಿಕ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸಿವೆ. ಇದರಿಂದಾಗಿ ಫಸಲುಗಳಿರುವ ತೆಂಗಿನ ಮರಗಳು, ಕಾಫಿ ಗಿಡಗಳು, ಅಡಿಕೆ ಮರಗಳು ಕಳೆದ ಕೆಲವು ದಿನಗಳಿಂದ ಈ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕಾಫಿ ತೋಟದೊಳಗೆ ದಾಳಿಯಿಟ್ಟು ಕೃಷಿ ಫಸಲುಗಳನ್ನು ಧ್ವಂಸಗೊಳಿಸುತ್ತಿದೆ. ಇದರಿಂದಾಗಿ ಕಾಫಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಳಗಾರರು ತಿಳಿಸಿದ್ದಾರೆ.

ಗುಹ್ಯ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದಾಗಿ ನೆಮ್ಮದಿ ಇಲ್ಲದಂತಾಗಿದೆ ಎಂದು ಬೆಳೆಗಾರರಾದ ನಡಿಕೇರಿಯಂಡ ಪೊನ್ನಪ್ಪ ತಿಳಿಸಿದ್ದಾರೆ. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.