ಸೋಮವಾರಪೇಟೆ, ಜು. ೨೮: ಪ್ರಸಕ್ತ ವರ್ಷ ವಾಡಿಕೆಗೂ ಮುನ್ನ ತುಂಬಿದ ಯಡೂರು ದೇವರ ಕೆರೆ ಹಾಗೂ ಪಟ್ಟಣದ ಆನೆಕೆರೆಗೆ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಕೆರೆಗಳನ್ನು ಹೂಳೆತ್ತಿಸಿದ ಹರಪಳ್ಳಿ ರವೀಂದ್ರ ಅವರು ಬಾಗಿನ ಅರ್ಪಿಸಿದರು.
ಈ ಎರಡೂ ಕೆರೆಗಳು ನಿರ್ವಹಣೆಯ ಕೊರತೆಯಿಂದ ಬತ್ತಿದ್ದ ಸಂದರ್ಭ ಹರಪಳ್ಳಿ ರವೀಂದ್ರ ಅವರು ಸುಮಾರು ೧೨ ಲಕ್ಷ ವ್ಯಯಿಸಿ ಕಳೆದ ೭ ವರ್ಷಗಳ ಹಿಂದೆ ಹೂಳೆತ್ತಿಸಿದ್ದರು. ಅಲ್ಲಿಂದ ಇಲ್ಲಿಯವೆಗೂ ಈ ಕೆರೆಗಳಲ್ಲಿ ನೀರು ಸಂಗ್ರಹವಿದ್ದು, ಪ್ರತಿ ವರ್ಷ ತುಂಬಿ ಹರಿಯುತ್ತಿದೆ.
ಯಡೂರು ಗ್ರಾಮದ ಕೆರೆಯು ಈಗಾಗಲೇ ಭರ್ತಿಯಾಗಿದ್ದು, ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಮೇಲೆ ಕೆರೆ ನೀರು ಹರಿಯುತ್ತಿದೆ, ಆನೆಕೆರೆಯೂ ಸಹ ತುಂಬಿದೆ.
ಈ ಹಿನ್ನೆಲೆ ರವೀಂದ್ರ ಅವರು ಕೆರೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಅಂತೆಯೇ ನಾಡಿನ ಸುಭಿಕ್ಷೆಗಾಗಿ ಜಲದೇವತೆಗೆ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಶಾಲಾ ಹಂತದಲ್ಲಿದ್ದ ಸಂದರ್ಭ ಯಡೂರು ಗ್ರಾಮದ ಕೆರೆಯ ನೀರನ್ನು ಸೇವಿಸುತ್ತಿದ್ದೆವು. ಇತ್ತೀಚಿನ ವರ್ಷಗಳಲ್ಲಿ ಕೆರೆ ಬತ್ತಿ ಹೋಗಿತ್ತು. ಗ್ರಾಮದ ಸುಭಿಕ್ಷೆ, ಜನ ಜಾನುವಾರುಗಳಿಗೆ ಕೆರೆಗಳು ಅತ್ಯಾವಶ್ಯಕ. ಇದನ್ನು ಮನಗಂಡು ಸ್ವ ಇಚ್ಛೆಯಿಂದ ಯಡೂರು ಕೆರೆಯ ಹೂಳು ತೆಗೆಸಲಾಯಿತು. ನಂತರ ಕೆಲವರ ಕೋರಿಕೆ ಮೇರೆ ಪಟ್ಟಣದ ಆನೆಕೆರೆಯ ಹೂಳೆತ್ತಿಸಿದ್ದು, ಅಲ್ಲಿಂದ ಇಲ್ಲಿಯವರೆಗೆ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಪ್ರತಿ ಮಳೆಗಾಲದಲ್ಲಿ ಕೆರೆಗಳು ಭರ್ತಿಯಾಗುತ್ತಿರುವುದು ಸಂತಸ ತಂದಿದೆ. ಸೇವೆಗೂ ಸಾರ್ಥಕತೆ ಬಂದಿದೆ ಎಂದರು.
ಈ ಸಂದರ್ಭ ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ನಿರ್ದೇಶಕ ಗೌಡಳ್ಳಿ ಪ್ರಸಿ, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ, ಆಟೋ ಯೂನಿಯನ್ ಅಧ್ಯಕ್ಷ ಗಂಗಾಧರ್, ಸಂಘ ಸಂಸ್ಥೆಗಳ ಪ್ರಮುಖರಾದ ಶೇಷಪ್ಪ, ರಂಗಸ್ವಾಮಿ, ರಮೇಶ್, ಜನಾರ್ಧನ್, ಕಿಶೋರ್, ಮಣಿ ಕುಶಾಲಪ್ಪ, ಅರ್ಚಕ ಸರ್ವೇಶ್ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.