ಮಡಿಕೇರಿ, ಜು. ೨೮: ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಮಡಿಕೇರಿಯ ವಿಕಾಸ್ ವೃದ್ಧಾಶ್ರಮದ ೩೧ ಹಿರಿಯರ ಸ್ವೆಟರ್, ಹೊದಿಕೆ, ಸ್ಕಾರ್ಫ್, ಟೋಪಿ ಮುಂತಾದವುಗಳನ್ನು ವಿತರಿಸ ಲಾಯಿತು. ಆಶ್ರಮದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಒಕ್ಕೂಟದ ಅಡ್ಮಿನ್ ಶಶಿಕುಮಾರ್ ಚೆಟ್ಟಳ್ಳಿ ಅವರು, ನಮ್ಮ ಒಕ್ಕೂಟವು ಹೆಸರಿಗಾಗಿ, ಕೀರ್ತಿಗಾಗಿ, ತೋರಿಕೆಗಾಗಿ ಕೆಲಸ ಮಾಡುತ್ತಿಲ್ಲ, ಬದಲಿಗೆ ಸಮಾಜದಲ್ಲಿ ತೀರಾ ಬಡತನದಲ್ಲಿರುವಂತಹ ಅರ್ಹ ಫಲಾನುಭವಿಗಳಿಗೆ ಪ್ರಯೋಜನ ವಾಗುವಂತಹ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಂಡು ಮುಂದುವರಿ ಯುತ್ತಾ ಬಂದಿದೆ ಎಂದು ಹೇಳಿದರು. ಇಂತಹ ಕಾರುಣ್ಯ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಪ್ರಸ್ತಾಪಿಸಿದಾಗಲೆಲ್ಲ ಒಕ್ಕೂಟದ ಸದಸ್ಯರು ಉದಾರ ಮನಸ್ಸಿನಿಂದ ಸಹಕರಿಸುತ್ತಾ ಬರುತ್ತಿದ್ದಾರೆ ಎಂದು ದಾನಿಗಳ ಕೊಡುಗೆಯನ್ನು ಸ್ಮರಿಸಿಕೊಂಡರು.
ಮುಖ್ಯ ಅತಿಥಿ ಒಕ್ಕೂಟದ ಅಡ್ಮಿನ್ ನಿವೃತ್ತ ಮೇಜರ್ ಡೇವಿಡ್ ವೇಗಸ್ ಮಾತನಾಡಿ, ಮುಂದೆ ಕೂಡ ಆಶ್ರಮದ ಹಿರಿಯರಿಗೆ ನಮ್ಮ ಒಕ್ಕೂಟ ದಿಂದ ಸಾಧ್ಯವಾಗುವ ಸಹಕಾರವನ್ನು ನೀಡುವುದಾಗಿ ಹೇಳಿದರು.
ಒಕ್ಕೂಟದ ಸ್ಥಾಪಕ ಅನಿಲ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ದಾನಿಗಳಾದ ಕವಿತಾ ರಮೇಶ್ ಒಕ್ಕೂಟದ ಕಾರ್ಯ ಶ್ಲಾಘಿಸಿದರು.
ಎಂ.ಇ. ಮಹಮ್ಮದ್, ಮನ್ಸೂರ್ ಫರ್ಯ, ಪಿ.ಪಿ. ಸುಕುಮಾರ್ ಹಾಕತ್ತೂರು, ಲೀಲಾವತಿ ಮಡಿಕೇರಿ, ಕೆ.ಎಸ್. ಅನಿಲ್ ಕುಮಾರ್ ಸುಂಟಿಕೊಪ್ಪ, ಹನೀಫ್ ಸೋನ ಮಡಿಕೇರಿ, ಪ್ರತಿನಿಧಿಗಳಾದ ಗಾಯತ್ರಿ ನರಸಿಂಹ, ಖೈರುನ್ನಿಸ, ಜಾನ್ ಬೆನೆಟ್ ವಿಕಾಸ್ ಆಶ್ರಮದ ವಕ್ತಾರ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ವಿಕಾಸ್ ಆಶ್ರಮದ ಮುಖ್ಯಸ್ಥರಾಗಿದ್ದ ರಮೇಶ್ ದಂಪತಿ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಒಕ್ಕೂಟದ ವತಿಯಿಂದ ಫಲಾನುಭವಿಗಳಿಗೆ ಲಘು ಉಪಹಾರ ಏರ್ಪಡಿಸಲಾಗಿತ್ತು.