ಕೂಡಿಗೆ, ಜು. ೨೮: ಶಿರಂಗಾಲ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಅಧ್ಯಕ್ಷೆ ಹೆಚ್.ಆರ್. ಲತಾಬಾಯಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಮಳೆ ಹಾನಿ ಮತ್ತು ಡೆಂಗ್ಯೂ ರೋಗದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆಗಳು ನಡೆದವು. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ, ಚರಂಡಿ ದುರಸ್ತಿ, ಬೀದಿ ದೀಪಗಳ ಅಳವಡಿಕೆ, ಶಿಥಿಲಾವಸ್ಥೆಯಲ್ಲಿರುವ ಮನೆಗಳ ಕುಟುಂಬದವರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಬದಲಿ ವ್ಯವಸ್ಥೆ, ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಜಲ ಜೀವನ್ ಕುಡಿಯುವ ನೀರಿನ ಯೋಜನೆಗೆ ಸಂಬAಧಿಸಿದ ಕ್ರಿಯಾ ಯೋಜನೆ ತಯಾರಿಸುವುದು, ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಕ್ರಿಯಾ ಯೋಜನೆಯ ಬಗ್ಗೆ ಚರ್ಚೆಗಳು ನಡೆದವು. ಸಭೆಯ ಅಧ್ಯಕ್ಷತೆ ವಹಿಸಿದ್ದ ಲತಾಬಾಯಿ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರದೊಂದಿಗೆ ಗ್ರಾಮದ ಅಭಿವೃದ್ಧಿಗೆ ಪೂರಕವಾದ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು. ಅಭಿವೃದ್ಧಿ ಅಧಿಕಾರಿ ಬಿ.ಆರ್. ಹೇಮಲತಾ ಸರಕಾರದ ಹೊಸ ಯೋಜನೆಗಳ ಬಗ್ಗೆ ಮತ್ತು ಸಭೆಗೆ ಬಂದ ಅರ್ಜಿಗಳ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಬಸವರಾಜ್ ಸೇರಿದಂತೆ ಸರ್ವ ಸದಸ್ಯರು, ಕಾರ್ಯದರ್ಶಿ ಕೆ.ಸಿ. ರವಿ ಹಾಜರಿದ್ದರು.