ಕುಶಾಲನಗರ, ಜು. ೨೮: ಪತ್ರಿಕಾರಂಗ ನೈಜ ಸಮಸ್ಯೆಗಳ ವಸ್ತು ಸ್ಥಿತಿ ವಿಚಾರಗಳನ್ನು ಪ್ರಕಟಿಸುವ ಮೂಲಕ ಕಾರ್ಯಾಂಗದ ಕಿವಿ ಹಿಂಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಸಮಗ್ರ ಪಾತ್ರ ವಹಿಸುತ್ತಿವೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಸ್ಯೆಗಳನ್ನು ಮತ್ತು ವಸ್ತು ಸ್ಥಿತಿ ವಿಚಾರಗಳನ್ನು ಅರಿತು ನೈಜ ಸುದ್ದಿಯಾಗಿ ಪ್ರಕಟಿಸಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಾಣುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅನುವು ಮಾಡಿದಂತಾಗುತ್ತದೆ ಎಂದರು.
ಈ ಸಂದರ್ಭ ಮಾತನಾಡಿದ ಅವರು ಕುಶಾಲನಗರ ತಾಲೂಕು ಪತ್ರಕರ್ತರ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ, ನಾಲ್ಕನೇ ಅಂಗವಾದ ಪತ್ರಿಕಾ ರಂಗ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುದ್ದಿ ಮಾಡುವ ಭರಾಟೆಯ ನಡುವೆ ಸತ್ಯಾಸತ್ಯತೆ ಬಗ್ಗೆ ಕೂಡ ಅವಲೋಕನ ಮಾಡಬೇಕಾಗಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪತ್ರಿಕಾ ದಿನಾಚರಣೆಯ ಮಹತ್ವ ಮತ್ತು ಇತಿಹಾಸದ ಬಗ್ಗೆ ಮಾಹಿತಿ ಒದಗಿಸಿದರು.
ಸಂಘದ ಕೊಡಗು ಜಿಲ್ಲಾಧ್ಯಕ್ಷೆ ಬಿ. ಆರ್ ಸವಿತಾ ರೈ ಅವರು ಮಾತನಾಡಿ, ಯಾವುದೇ ಸುದ್ದಿಗಳು ಆಭಾಸ ಉಂಟು ಮಾಡಬಾರದು. ಬ್ರೇಕಿಂಗ್ ಸುದ್ದಿಯ ಧಾವಂತದಲ್ಲಿ ಸಮಾಜದ ಸ್ವಾಸ್ಥö್ಯ ಕೆಡುವಂತಾಗಿದೆ. ಸುದ್ದಿ ಮಾಡುವ ಸಂದರ್ಭ ವಿಮರ್ಶೆ ಮಾಡುವ ಕೆಲಸ ಪತ್ರಕರ್ತನದಲ್ಲ ಎಂದು ಕಿವಿಮಾತು ಹೇಳಿದರು.
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟಿçÃಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ವರದಿ ಆಯ್ಕೆ ಹಿನ್ನೆಲೆಯಲ್ಲಿ ತಾಲೂಕಿನ ಎಂಟು ಮಂದಿ ಪತ್ರಕರ್ತರಾದ ಎಂ.ಎನ್. ಚಂದ್ರಮೋಹನ್, ಹೆಚ್.ವಿ. ವಿನೋದ್, ರಘು ಹೆಬ್ಬಾಲೆ, ವನಿತಾ ಚಂದ್ರಮೋಹನ್, ನಾಗರಾಜ ಶೆಟ್ಟಿ, ಕೆ.ಜೆ. ಶಿವರಾಜ್, ಇಸ್ಮಾಯಿಲ್ ಕಂಡಕೆರೆ, ಷಂಶುದ್ದೀನ್ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕುಶಾಲನಗರ ಸಂಘದ ಕಚೇರಿಯಲ್ಲಿ ಕಳೆದ ಸಾಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅತೀ ಹೆಚ್ಚಿನ ಹಾಜರಾತಿ ಪಡೆದ ಪತ್ರಕರ್ತರಾದ ಎಂ.ಎನ್. ಚಂದ್ರಮೋಹನ್, ವಿನೋದ್, ನಾಗರಾಜ ಶೆಟ್ಟಿ ಅವರುಗಳನ್ನು ನಗದು ಬಹುಮಾನ ನೀಡುವ ಮೂಲಕ ಗುರುತಿಸಲಾಯಿತು. ಮುಖ್ಯ ಅತಿಥಿ ಗಳಾದ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಖಜಾಂಚಿ ಕುಡೆಕಲ್ ಗಣೇಶ್ ಪ್ರಾರ್ಥಿಸಿದರು. ಜಿಲ್ಲಾ ನಿರ್ದೇಶಕರುಗಳಾದ ಷಂಶುದ್ದೀನ್ ಸ್ವಾಗತ, ಟಿ.ಆರ್. ಪ್ರಭುದೇವ್ ನಿರೂಪಿಸಿ, ರಘು ಹೆಬ್ಬಾಲೆ ವಂದಿಸಿದರು.
ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಮುನ್ನ ತಾಲೂಕು ಸಂಘದ ವಾರ್ಷಿಕ ಮಹಾಸಭೆ ನಡೆಯಿತು.