ಸೋಮವಾರಪೇಟೆ, ಜು. ೨೮: ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ದಿನಗಳಲ್ಲಿ ದುಪ್ಪಟ್ಟು ಮಳೆಯಾಗಿದೆ. ಭಾರೀ ಪ್ರಮಾಣದ ಹಾನಿಯೂ ಸಂಭವಿಸಿದೆ. ಕೊಡಗಿಗೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಕಾಫಿ, ಕರಿಮೆಣಸು ಬೆಳೆ ನಷ್ಟಗಳಿಗೆ ಕೇಂದ್ರ ಸರ್ಕಾರದಿಂದಲೂ ಪರಿಹಾರ ಒದಗಿಸಲು ಸಂಸದರೊAದಿಗೆ ಮಾತುಕತೆ ನಡೆಸಿ, ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಹೇಳಿದರು.

ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ಅತೀ ಹೆಚ್ಚು ಹಾನಿ ಗೊಳಗಾಗಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆಯಿಂದಾದ ಅವಾಂತರ ಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಕಳೆದ ಸಾಲಿನಲ್ಲಿಯೂ ಮಳೆ ಹೆಚ್ಚಾಗಿ ಫಸಲು ನಷ್ಟ ಆದ ಸಂದರ್ಭ ಕೇಂದ್ರ ಸರ್ಕಾರ ಕೊಡಗಿನ ರೈತರಿಗೆ ಹೆಚ್ಚು ಪರಿಹಾರ ನೀಡಿದೆ. ಈ ಬಾರಿಯೂ ಸಂಸದರ ಮುಖಾಂತರ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದರು.

ಕೊಡಗಿನಲ್ಲಿ ಈ ಬಾರಿ ವಾಡಿಕೆಗಿಂತಲೂ ಅಧಿಕ ಪ್ರಮಾಣದ ಮಳೆ ಸುರಿದಿದೆ. ಜಲಾಶಯಗಳು ಭರ್ತಿಯಾಗಿದ್ದು, ನೆರೆಯ ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲಿ ಸಮಸ್ಯೆಗಳು ಸೃಷ್ಟಿಯಾಗುವುದಿಲ್ಲ. ಇದರೊಂದಿಗೆ ಮೈಸೂರು, ಮಂಡ್ಯ, ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯೂ ಉದ್ಭವಿಸುವುದಿಲ್ಲ. ರೈತರ ಕೃಷಿ ಚಟುವಟಿಕೆಗಳಿಗೂ ತೊಂದರೆಯಿಲ್ಲ. ಆದರೆ ಕೊಡಗಿನಲ್ಲಿ ಮಾತ್ರ ರೈತರು, ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ಈ ಹಿನ್ನೆಲೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಾಫಿ, ಕರಿಮೆಣಸು, ಏಲಕ್ಕಿ, ಅಡಿಕೆ ಕೃಷಿ ಭಾರೀ ಮಳೆಯಿಂದ ವಿಪರೀತ ಹಾಳಾಗಿದೆ. ರಸ್ತೆಗಳೂ ದುಸ್ಥಿತಿಗೆ ತಲುಪಿವೆ. ಕೊಡಗಿಗೆ ನಷ್ಟವಾದರೂ ಇತರ ಭಾಗಗಳಿಗೆ ನೀರು ಒದಗಿದೆ. ಹಾಗಾಗಿ ಸರ್ಕಾರ ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಸ್ಥಳೀಯ ಶಾಸಕರುಗಳು ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು. ಮುಖ್ಯಮಂತ್ರಿಗಳೂ ಸಹ ಕೊಡಗಿನ ಸಮಸ್ಯೆಗೆ ಸ್ಪಂದಿಸಬೇಕು ಎಂದು ಅಭಿ ಪ್ರಾಯಿಸಿದರು.

ಉಪ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಕಾವೇರಿ ನೀರಾವರಿ ನಿರ್ವಹಣೆ ಸಮಿತಿ ಸಭೆಯಲ್ಲೂ ಅನುದಾನಕ್ಕೆ ಪ್ರಸ್ತಾಪ ಮಾಡಿದ್ದೇನೆ ಎಂದ ಅವರು, ಕಳೆದ ೧೦ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಒಟ್ಟಾರೆ ೩೫ ಕೋಟಿ ನಷ್ಟದ ಅಂದಾಜು ಮಾಡಲಾಗಿದೆ. ಆದರೆ ಕಳೆದ ಐದಾರು ದಿನಗಳಿಂದ ಮಳೆ ಅಧಿಕವಾಗಿ ಸುರಿದಿದೆ. ಹಾನಿಯ ಪ್ರಮಾಣವೂ ಹೆಚ್ಚಾಗಿದೆ. ಈ ಬಗ್ಗೆ ಸಮಗ್ರ ವರದಿ ತಯಾರಿಸಲು ಸೂಚಿಸಲಾಗಿದೆ. ಕೊಡಗಿನಲ್ಲಿ ಜಿ.ಪಂ, ಲೋಕೋಪಯೋಗಿ ಇಲಾಖೆ, ಗ್ರಾಮೀಣ ಪ್ರದೇಶದ ರಸ್ತೆಗಳೂ ಹಾಳಾಗಿವೆ. ರಸ್ತೆಗಳ ಹಾನಿ ಕುರಿತಂತೆ ವರದಿ ತಯಾರಿಸಿ ಸಲ್ಲಿಸಲು ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮನೆ, ಆಸ್ತಿ ಪಾಸ್ತಿ ಹಾನಿ, ರಸ್ತೆ, ಕೃಷಿ ಹಾನಿಗೆ ಸಂಬAಧಿಸಿದAತೆ ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳೂ ಸಹ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಅಧಿಕಾರಿಗಳಿAದ ವರದಿ ಬಂದ ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಮುಂದಿನ ನಾಲ್ಕು ದಿನದೊಳಗೆ ತುರ್ತು ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸುಜಾ ಕುಶಾಲಪ್ಪ ಅವರು ತಿಳಿಸಿದರು.

ತೀವ್ರ ಮಳೆಯಿಂದಾಗಿ ಹಾನಿಯಾಗಿರುವ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಸ್ತೆಗಳ ಬಗ್ಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣಮೂರ್ತಿ ಅವರಿಂದ ಮಾಹಿತಿ ಪಡೆದ ಶಾಸಕರು, ತಾಲೂಕು ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಆಗಿರುವ ನಷ್ಟಗಳ ಬಗ್ಗೆ ಸಮಗ್ರ ವರದಿ ತಯಾರಿಸುವಂತೆ ಸೂಚಿಸಿದರು.

ಭಾರೀ ಮಳೆಯಿಂದಾಗಿ ಮನೆ ಕುಸಿತಗೊಂಡಿರುವ ತೋಳೂರುಶೆಟ್ಟಳ್ಳಿಯ ಟಿ. ಲಕ್ಷö್ಮಮ್ಮ, ಊರೊಳಗಿನಕೊಪ್ಪದ ಕೆ.ಜೆ. ನವೀನ್, ವನಗೂರುಕೊಪ್ಪದ ವಿ.ಕೆ. ಇಂದಿರಾ, ಜಾನಕಿ ಅವರುಗಳ ಮನೆಗಳನ್ನು ಶಾಸಕರು ವೀಕ್ಷಿಸಿದರು. ಇದರೊಂದಿಗೆ ಯಡೂರು ಗ್ರಾಮದಲ್ಲಿ ಸುಮಾರು ಮುಕ್ಕಾಲು ಏಕರೆ ತೋಟ, ಐದಾರು ಅಡಿಗಳವರೆಗೆ ಕುಸಿದು, ಅಪಾಯದ ಸ್ಥಿತಿಯಲ್ಲಿರುವುದನ್ನು ಪರಿಶೀಲಿಸಿ, ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಜೇಡಿಗುಂಡಿಯಲ್ಲಿ ಬರೆ ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿರುವುದನ್ನು ಪರಿಶೀಲಿಸಿದ ಸುಜಾ ಕುಶಾಲಪ್ಪ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಿಳಿಸಿದರು. ಬೆಟ್ಟದಳ್ಳಿ ಭಾಗದಲ್ಲಿ ಉಂಟಾಗಿರುವ ಕೃಷಿ ಹಾನಿಯ ಬಗ್ಗೆ ಸ್ಥಳೀಯ ಗ್ರಾ.ಪಂ. ಸಿಬ್ಬಂದಿಗಳಿAದ ಮಾಹಿತಿ ಪಡೆದರು. ಹೊಸಬೀಡು ಗ್ರಾಮದಲ್ಲಿ ಲೋಕೋಪಯೋಗಿ ರಸ್ತೆಗೆ ನಿರ್ಮಿಸಿರುವ ತಡೆಗೋಡೆ ಕುಸಿದು ಹಾನಿಯಾಗಿರುವುದನ್ನು ಪರಿಶೀಲಿಸಿದರು.

ಮನೆ ಹಾನಿಯಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಾಂತ್ವಾನ ಹೇಳಿ, ಶೀಘ್ರವಾಗಿ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ ಎಂ.ಎಲ್.ಸಿ. ಸುಜಾ ಕುಶಾಲಪ್ಪ ಅವರು, ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ ಆಗಿರುವ ಮನೆಗಳ ಹಾನಿ ಬಗ್ಗೆ ಕಂದಾಯ ನಿರೀಕ್ಷಕ ದಾಮೋದರ್, ಗ್ರಾಮ ಆಡಳಿತಾಧಿಕಾರಿ ತಳವಾರ್ ಕರಿಬಸವರಾಜು ಅವರುಗಳೊಂದಿಗೆ ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭ ಪ್ರಮುಖರಾದ ಹರಗ ಉದಯ, ಹುಲ್ಲೂರಿಕೊಪ್ಪ ಚಂದ್ರು, ಕೆ.ಕೆ. ಸುಧಾಕರ್, ಉಮೇಶ್, ಶಿವಕುಮಾರ್, ಮದನ್, ಬೆಟ್ಟದಳ್ಳಿ ಸಂಪತ್, ಗ್ರಾ.ಪಂ. ಸಿಬ್ಬಂದಿ ಗಂಧರ್ವ, ಸುಧಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.