ಸೋಮವಾರಪೇಟೆ, ಜು. ೨೮: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತೋಳೂರುಶೆಟ್ಟಳ್ಳಿ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತ ರೈ, ಪ್ರೌಢಶಾಲಾ ಶಿಕ್ಷಣ ವಿದ್ಯಾರ್ಥಿಗಳ ಬದುಕಿನ ಭವಿಷ್ಯದ ತಳಪಾಯವಾಗಿದ್ದು, ಮನಸ್ಸನ್ನು ಕೇಂದ್ರೀಕರಿಸಿಕೊAಡು, ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ಉತ್ತಮ ಸಾಧನೆ ಮಾಡುವ ಸಾಮರ್ಥ್ಯ ಪ್ರತಿ ವಿದ್ಯಾರ್ಥಿಗಳಲ್ಲೂ ಇರುತ್ತದೆ. ಸಾಧಿಸುವ ಗುರಿ, ದೃಢತೆ, ಆತ್ಮವಿಶ್ವಾಸ ಇದ್ದಾಗ ಮಾತ್ರ ಗುರಿ ಸಾಧಿಸಬಹುದು. ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ನಂತರ ಉತ್ತಮ ಬದುಕಿಗೆ ಬೇಕಾಗುವ ಬಹಳಷ್ಟು ಅವಕಾಶಗಳು ತೆರಯಲ್ಪಡುತ್ತವೆ. ಅದರ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಮಾತನಾಡಿ, ಬಲಿಷ್ಠ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪತ್ರಿಕಾ ಮಾಧ್ಯಮಗಳು ಮಹತ್ತರ ಪಾತ್ರ ವಹಿಸುತ್ತವೆ. ಜಿಲ್ಲೆಯಲ್ಲಿ ಪತ್ರಿಕೋದ್ಯಮ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಇಲ್ಲಿನ ಪತ್ರಕರ್ತರು ಮೌಲ್ಯಾಧಾರಿತ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಪತ್ರಕರ್ತ ಹಾಗೂ ಕಿರುಚಿತ್ರ ನಿರ್ದೇಶಕ ವಿಶ್ವಕುಂಬೂರು ಅವರುಗಳನ್ನು ಸನ್ಮಾನಿಸಲಾಯಿತು. ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಖಜಾಂಚಿ ಬಿ.ಎ. ಭಾಸ್ಕರ್ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ್ ಹಾನಗಲ್, ಕಾರ್ಯದರ್ಶಿ ಮಾಲಂಬಿ ದಿನೇಶ್, ವಾರ್ಡನ್ ಶಬರಿ ಗಿರೀಶ್ ಇದ್ದರು.
ಪತ್ರಿಕಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಲಾಸ್ಯ, ಕಶ್ವಿ, ಶಭಾ, ಮೌಲ್ಯ ಅವರುಗಳಿಗೆ ಬಹುಮಾನ ವಿತರಿಸಲಾಯಿತು.